ಬೆಂಗಳೂರು: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಸಾವನ್ನಪ್ಪಿದ ಪ್ರಕರಣವು ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಿಸಿದೆ. ಈ ಸಂಬಂಧ ನಗರದ ಮಹಾಲಕ್ಷ್ಮೀ ಲೇಔಟ್ ಬಿಬಿಎಂಪಿ ಕಚೇರಿ ಎದುರು ಪೋಷಕರು, ಸಾರ್ವಜನಿಕರು ಹಾಗೂ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಶುಕ್ರವಾರ (ಡಿ 9) ಪ್ರತಿಭಟನೆ ನಡೆಸಿದರು. ಮಕ್ಕಳ ಸಾವಿಗೆ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ. ಹೈಟೆನ್ಷನ್ ವೈರ್ ಕೆಳಗೆ ಮನೆ ಕಟ್ಟಲು ಹೇಗೆ ಅವಕಾಶ ನೀಡಿದ್ದು ಹೇಗೆ? ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದಾದರೂ ಹೇಗೆ? ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಂದಿನಿ ಬಡಾವಣೆಯಲ್ಲಿ ಹೈಟೆನ್ಷನ್ ವೈರ್ ಸ್ಪರ್ಶವಾಗಿದ್ದರಂತೆ ಚಂದ್ರು ಮತ್ತು ಸುಪ್ರೀತ್ ಎಂಬ ಬಾಲಕರು ಇತ್ತೀಚೆಗೆ ಸಾವನ್ನಪ್ಪಿದ್ದರು. ಮಕ್ಕಳ ಸಾವಿಗೆ ಕೇವಲ ಬೆಸ್ಕಾಂ ಅಷ್ಟೇ ಕಾರಣವಲ್ಲ. ಬಿಬಿಎಂಪಿ ಕೂಡ ಕಾರಣವಾಗಿದೆ. ಹೈಟೆನ್ಷನ್ ವೈರ್ ಕೆಳಗೆ ಮನೆ ಕಟ್ಟಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡಿದ್ದು ಹೇಗೆ? ಮಕ್ಕಳ ಸಾವಿಗೆ ನ್ಯಾಯ ಸಿಗಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಮೃತ ಬಾಲಕ ಸುಪ್ರೀತ್ ತಾಯಿ ಮಾತನಾಡಿ, ನನ್ನ ಮಗನಿಗೆ ಆದ ಪರಿಸ್ಥಿತಿ ಯಾರಿಗೂ ಆಗಬಾರದು. ಹೈಟೆನ್ಷನ್ ತಂತಿ ಇರುವ ಕಡೆ ಕಟ್ಟಡ ನಿರ್ಮಿಸಲಾಗಿದೆ. ಮನೆಗಳ ಬಳಿ ಇರುವ ಹೈಟೆನ್ಷನ್ ವೈರ್ ತೆರವು ಮಾಡಬೇಕು. ಇಲ್ಲದಿದ್ದರೆ ಬಿಬಿಎಂಪಿ, ಬೆಸ್ಕಾಂ ಕಚೇರಿ ಬಳಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಬಿಬಿಎಂಪಿ ಎಕ್ಸಿಕ್ಯುಟಿವ್ ಎಂಜಿನಿಯರ್ ತಿಮ್ಮರಸು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಮರ್ಪಕ ಉತ್ತರ ನೀಡದಿದ್ದರೆ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಕಚೇರಿಯಿಂದ ಹೊರಗೆ ಬರಲು ಬಿಡದೆ ದಿಗ್ಬಂಧನ ಹಾಕಲಾಗುವುದು. ಸ್ಥಳಕ್ಕೆ ಬಂದು ಮನವಿ ತೆಗೆದುಕೊಳ್ಳದಿದ್ದರೆ ಹೋರಾಟವು ಉಗ್ರರೂಪ ತಳೆಯಲಿದೆ ಎಂದು ಎಚ್ಚರಿಸಿದರು. ಮೃತಮಟ್ಟ ಮಕ್ಕಳ ಪೋಷಕರಿಗೆ ₹ 50 ಸಾವಿರ ಪರಿಹಾರ ನೀಡಲಾಗಿದೆ ಎಂಬ ಅಧಿಕಾರಿಗಳ ಉತ್ತರವೂ ಪೋಷಕರನ್ನು ಕೆರಳಿಸಿತು. ‘ನಿಮ್ 50 ಸಾವಿರ ಪರಿಹಾರ ಯಾರಿಗ್ರೀ ಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎರಡು ಸಾವು ಸಂಭವಿಸಿದ ನಂತರ ಕನಿಷ್ಠ ಪಕ್ಷ ಮಾನವೀಯತೆಗಾದರೂ ನೀವು ಹೋಗಿಲ್ಲ’ ಎಂದು ಪ್ರತಿಭಟನಾನಿರತರು ಬೇಸರ ವ್ಯಕ್ತಪಡಿಸಿದರು. ‘ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ನಿಮಗೆ ಯಾರ ಮೇಲಾದರೂ ಅನುಮಾನವಿದ್ದರೆ ದೂರುಕೊಡಿ. ತನಿಖೆ ಮಾಡಿಸುತ್ತೇವೆ’ ಎಂದು ಬಿಬಿಎಂಪಿ ಎಂಜಿನಿಯರ್ ತಿಮ್ಮರಸು ಪ್ರತಿಭಟನಾನಿರತರನ್ನು ಕೋರಿದರು.
ಇದನ್ನೂ ಓದಿ: Bengaluru: ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ತಗುಲಿದ ಹೈಟೆನ್ಷನ್ ವಿದ್ಯುತ್ ತಂತಿ
ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Fri, 9 December 22