ಬೆಂಗಳೂರು: ಅಯೋಧ್ಯೆ ರಾಮಮಂದಿರ (Ayodhya Ram Mandir) ಸ್ಫೋಟಿಸಲು ಪಿಎಫ್ಐ (PFI) ಸಂಚು ರೂಪಿಸಿದ್ದ ಆಘಾತಕಾರಿ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ರಾಮಮಂದಿರದ ಮೇಲೆ ಬಾಂಬ್ ದಾಳಿಗೆ ಷಡ್ಯಂತ್ರ ರೂಪಿಸಿದ್ದ ಪಿಎಫ್ಐ ಕಾರ್ಯಕರ್ತರು ಅದೇ ಜಾಗದಲ್ಲಿ ನಂತರ ಮಸೀದಿ ನಿರ್ಮಿಸುವ ಆಲೋಚನೆ ಹೊಂದಿದ್ದರು ಎಂದು ಹೇಳಲಾಗಿದೆ. ಇತ್ತೀಚೆಗೆ ದೇಶವ್ಯಾಪಿ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದ ವೇಳೆ ಮಹಾರಾಷ್ಟ್ರದಲ್ಲಿ 35 ಮಂದಿಯನ್ನು ಬಂಧಿಸಲಾಗಿತ್ತು. ಮಾಲೆಂಗಾವ್, ಪುಣೆ ಸೇರಿದ ಹಲವೆಡೆ ದಾಳಿ ನಡೆದಿತ್ತು. ವಿಚಾರಣೆ ವೇಳೆ ಆರೋಪಿಗಳು ರಾಮಮಂದಿರ ಸ್ಫೋಟಿಸುವ ಸಂಚಿನ ಬಗ್ಗೆ ತಿಳಿಸಿದ್ದಾರೆ.
ಪಿಎಫ್ಐ ಸಂಚಿನ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಿಎಫ್ಐ ಸದಸ್ಯರ ವಾಟ್ಸಾಪ್ ಗುಂಪಿನ ಅಡ್ಮಿನ್ ಪಾಕಿಸ್ತಾನದ ವ್ಯಕ್ತಿ
ಪಿಎಫ್ಐ ಸದಸ್ಯರ ವಾಟ್ಸಾಪ್ ಗುಂಪಿನ ಅಡ್ಮಿನ್ ಪಾಕಿಸ್ತಾನ ಮೂಲದ ವ್ಯಕ್ತಿ ಎಂದು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಾಟ್ಸ್ಯಾಪ್ ಗ್ರೂಪ್ ಅನ್ನು ದೇಶವಿರೋಧಿ ಚಟುವಟಿಕೆಯ ಸಂಚು ರೂಪಿಸಲು ಸಂಘಟಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ವಾಟ್ಸ್ಯಾಪ್ ಗ್ರೂಪ್ನಲ್ಲಿ ಅಫ್ಘಾನಿಸ್ತಾನ ಮತ್ತು ಅರಬ್ ದೇಶಗಳ 175ಕ್ಕೂ ಹೆಚ್ಚು ಸದಸ್ಯರಿದ್ದರು. ಕೆಲ ಸದಸ್ಯರು ವಿದೇಶದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸಮಾಜ ವಿರೋಧಿ ಕೃತ್ಯಗಳಿಗೆ ಸಂಚು ನಡೆಸಿದ ಆರೋಪದ ಮೇಲೆ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರವು ಕಳೆದ ಸೆ 22ರಂದು ಐದು ವರ್ಷಗಳ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿತು.
Published On - 11:44 am, Thu, 20 October 22