ಬೆಂಗಳೂರು, ಜುಲೈ.14: ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದಲ್ಲ ಒಂದು ಅಕ್ರಮಗಳು ನಡೆದು ಜಗತ್ ಜಾಹೀರಾಗಿ ಅಧಿಕಾರಿಗಳು ತಲೆ ತಗ್ಗಿಸುವಂತಾಗುತ್ತಿತ್ತು. ಹೀಗಾಗಿ ಇಂತಹ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಕೆಇಎ (KEA) ಮುಂದಾಗಿದ್ದು ಕೆಇಎ ನಡೆಸುವ ಪ್ರತಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ (Webcasting) ಹಾಗೂ ಎಇ ತಂತ್ರಜ್ಞಾನವನ್ನ (AI Technology) ಅಳವಡಿಸಲು ಮುಂದಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ವೆಬ್ ಕಾಸ್ಟಿಂಗ್ ಅನ್ನು ಅಳವಡಿಕೆ ಮಾಡಿದ್ದಾಗ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಕೆಇಎ ವೆಬ್‌ಕಾಸ್ಟಿಂಗ್‌ನ್ನು ಪ್ರತಿ ಪರೀಕ್ಷೆಯಲ್ಲೂ ಕೂಡ ಅಳವಡಿಸಲು ಮುಂದಾಗಿದ್ದು ನಿನ್ನೆ ಮೊದಲ ಹಂತವಾಗಿ ಬಿಎಂಟಿಸಿ (ಕಲ್ಯಾಣ ಕರ್ನಾಟಕ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆಯಲ್ಲಿ ಅಳವಡಿಸಲಾಗಿತ್ತು. ಇನ್ನೂ ಬೆಂಗಳೂರು, ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳ ಒಟ್ಟು 377 ಕೊಠಡಿಗಳಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಯಿತು.
ವೆಬ್‌ಕಾಸ್ಟಿಂಗ್ ಮೂಲಕ ನೇರವಾಗಿ ಪರೀಕ್ಷಾ ಕೊಠಡಿಯಿಂದ ಲೈವ್ ವಿಷ್ಯೂಯಲ್‌ಗಳು ಕಮಾಂಡ್ ರೂಂನಲ್ಲಿ ವೀಕ್ಷಿಸುವ ಅವಕಾಶವಿದ್ದು ಇದರ ಸಹಾಯದಿಂದ ಶಿಕ್ಷಕರು ಹಾಗೂ ಅಭ್ಯರ್ಥಿಗಳ ಚಲನವಲನಗಳನ್ನ ಒಮ್ಮೆಲೇ ವೀಕ್ಷಿಸಬಹುದು. ಇನ್ನೂ ಎಐ ತಂತ್ರಜ್ಞಾನ ಹಾಗೂ ಫೇಸ್ ರೆಕಾಗ್ನೈಸೆಷನ್ ಕೂಡ ಅಳವಡಿಸಿದ್ದು ಇದರಿಂದ ಅಭ್ಯರ್ಥಿಗಳ ಮುಖ ಹಾಗೂ ಫೋಟೋವನ್ನ ಸ್ಕ್ಯಾನ್ ಮಾಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳ ಸರಿಯಾದ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಇನ್ನೂ ಈ ವೆಬ್ ಕಾಸ್ಟಿಂಗ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತೆ ಎಂದು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲು ಉನ್ನತ ಶಿಕ್ಷಣ ಸಚಿವ ಕೆಇಎಯ ಕಮಾಂಡ್ ರೂಂಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಹರಿಯುವ ನೀರನ್ನು ತಡೆಯಲಾಗದು, ಗುಂಪುಗಾರಿಕೆ ಇಲ್ಲಿ ನಡೆಯದು: ಉಮಾಪತಿ ಶ್ರೀನಿವಾಸ್
ಇದಷ್ಟೇ ಅಲ್ಲದೇ ಪರೀಕ್ಷಾ ಅಕ್ರಮ ದೊಡ್ಡ ಜಾಲವಾಗಿ ಪರಿಣಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬೇಸಡ್ ಟೆಸ್ಟ್ ಪರಿಚಯ ಮಾಡೋ ಬಗ್ಗೆ ಕೂಡ ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗೆ ಅರ್ಜಿ ಫಿಲ್ ಅಪ್ ಮಾಡೋದಕ್ಕೆ ಪ್ರತ್ಯೇಕ ಆಪ್ ಮೂಲಕ ತರಬೇತಿ ನೀಡುವುದರ ಬಗ್ಗೆ ಹಾಗೂ ಮಿತ್ರ ತಂತ್ರಾಂಶಕ್ಕೆ ಹೆಚ್ಚುವರಿ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಹೇಳಿದರು.
ಒಟ್ಟನಲ್ಲಿ ಪರೀಕ್ಷಾ ಅಕ್ರಮಗಳನ್ನ ತಡೆಗಟ್ಟಲು ಉನ್ನತ ಶಿಕ್ಷಣ ಇಲಾಖೆ ತಂತ್ರಜ್ಞಾನವನ್ನ ಬಳಸಿಕೊಳ್ಳುತ್ತಿದ್ದು ಈ ಹೊಸ ಪ್ಲ್ಯಾನ್‌ಗಳು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ