ಪಿಂಕ್ ಲೈನ್ ಮೆಟ್ರೋಗೆ ಇಂದು ಪ್ರಧಾನಿ ಮೋದಿ ಚಾಲನೆ: 100 ಕಿಮೀ ಗಡಿ ದಾಟಲಿದೆ ಬೆಂಗಳೂರಿನ ಮೆಟ್ರೋ ಜಾಲ

ಪ್ರಧಾನಿ ಮೋದಿ ಬೆಂಗಳೂರು ಭೇಟಿ ಹಾಗೂ ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆ: ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ಎಸ್‌.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗಿನ ಸುಮಾರು 7.5 ಕಿ.ಮೀ. ಮಾರ್ಗದಲ್ಲಿ ಆರು ನಿಲ್ದಾಣಗಳು ಆರಂಭವಾಗಲಿವೆ. ಶನಿವಾರದಿಂದ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಸಿಗಲಿದೆ.

ಪಿಂಕ್ ಲೈನ್ ಮೆಟ್ರೋಗೆ ಇಂದು ಪ್ರಧಾನಿ ಮೋದಿ ಚಾಲನೆ: 100 ಕಿಮೀ ಗಡಿ ದಾಟಲಿದೆ ಬೆಂಗಳೂರಿನ ಮೆಟ್ರೋ ಜಾಲ
ಎಸ್‌.ಜಿ. ಪಾಳ್ಯ ಮೆಟ್ರೋ ನಿಲ್ದಾಣ
Edited By:

Updated on: Nov 13, 2026 | 6:51 AM

ಮುಖ್ಯಾಂಶಗಳು

  • ಇಂದು ಪಿಂಕ್ ಲೈನ್‌ ಮೆಟ್ರೋಗೆ ಮೋದಿ ಚಾಲನೆ
  • ಆರು ಹೊಸ ಮೆಟ್ರೋ ನಿಲ್ದಾಣಗಳ ಲೋಕಾರ್ಪಣೆ
  • ಶನಿವಾರದಿಂದ ಪ್ರಯಾಣಿಕರ ಸಂಚಾರಕ್ಕೆ ಅವಕಾಶ

ಬೆಂಗಳೂರು, ನವೆಂಬರ್ 13: ನಮ್ಮ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ನಿರೀಕ್ಷೆ ಇಂದು ಸಾಕಾರಗೊಳ್ಳುತ್ತಿದೆ. ಬೆಂಗಳೂರಿನ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದ್ದು, ನಮ್ಮ ಮೆಟ್ರೋ ಜಾಲ 100 ಕಿಲೋಮೀಟರ್ ಗಡಿ ದಾಟಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಿಂಕ್ ಲೈನ್ ಮೆಟ್ರೋ ಮಾರ್ಗದ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಎಸ್‌.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗಿನ ಸುಮಾರು 7.5 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಆರು ಮೆಟ್ರೋ ನಿಲ್ದಾಣಗಳನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಮಧ್ಯಾಹ್ನ ಸುಮಾರು 12.40ಕ್ಕೆ ಎಸ್‌.ಜಿ. ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್‌ಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಿದ್ಧಗೊಳಿಸಲಾಗಿದ್ದು, ಪಿಂಕ್ ಮತ್ತು ಹಳದಿ ಬಣ್ಣಗಳ ಅಲಂಕಾರದಿಂದ ನಿಲ್ದಾಣಗಳು ಕಂಗೊಳಿಸುತ್ತಿವೆ.

ಮೋದಿ ಮೆಟ್ರೋ ಪ್ರಯಾಣ

ಎಸ್‌.ಜಿ. ಪಾಳ್ಯದಿಂದ ಬಿಳೇಕಹಳ್ಳಿ-ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ಪ್ರಧಾನಿ ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಈ ವೇಳೆ ರಾಜ್ಯಪಾಲೆ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ.

Loading...

ಬಳಿಕ ಐಐಎಂಬಿ ಕ್ಯಾಂಪಸ್‌ನಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ 15 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೂ ಹಸಿರು ನಿಶಾನೆ

ಮಡಗಾಂವ್-ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಪ್ರಧಾನಿ ಮೋದಿ ವೇದಿಕೆಯಿಂದಲೇ ಹಸಿರು ನಿಶಾನೆ ತೋರಲಿದ್ದಾರೆ. ಹಸಿರು ನಿಶಾನೆ ತೋರಿದ ಬಳಿಕ ರೈಲು ಎಸ್‌ಎಂವಿಟಿ ರೈಲ್ವೆ ನಿಲ್ದಾಣದಿಂದ ಮಡಗಾಂವ್ ಕಡೆಗೆ ಸಂಚಾರ ಆರಂಭಿಸಲಿದೆ.

ಇಂದು ಲೋಕಾರ್ಪಣೆಯಾಗುವ ಆರು ಮೆಟ್ರೋ ನಿಲ್ದಾಣಗಳು

  1. ಎಸ್‌.ಜಿ. ಪಾಳ್ಯ (ಸುದ್ದುಗುಂಟೆ ಪಾಳ್ಯ)
  2. ಜಯದೇವ ಆಸ್ಪತ್ರೆ
  3. ಎನ್‌.ಎಸ್‌. ಪಾಳ್ಯ-ಜೆ.ಪಿ. ನಗರ 4ನೇ ಹಂತ
  4. ಐಐಎಂಬಿ-ಬಿಳೇಕಹಳ್ಳಿ
  5. ಹುಳಿಮಾವು
  6. ಕಾಳೇನ ಅಗ್ರಹಾರ

ಬಿಗಿ ಭದ್ರತೆ, ಕಾನ್ವಾಯ್ ರಿಹರ್ಸಲ್

Namma Metro Pink Line Inaguration And Security

ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಎಸ್‌.ಜಿ. ಪಾಳ್ಯ ಮೆಟ್ರೋ ನಿಲ್ದಾಣದ ಸುತ್ತಮುತ್ತ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ. ಮೆಟ್ರೋ ನಿಲ್ದಾಣದ ಎರಡೂ ಬದಿಯ ಪಾದಚಾರಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಎಸ್‌ಪಿಜಿ ಮತ್ತು ಪೊಲೀಸ್ ಇಲಾಖೆಯಿಂದ ಪ್ರಧಾನಿ ಕಾನ್ವಾಯ್‌ನ ರಿಹರ್ಸಲ್ ಕೂಡ ನಡೆಸಲಾಗಿದ್ದು, ಸುಮಾರು 20ಕ್ಕೂ ಹೆಚ್ಚು ಭದ್ರತಾ ವಾಹನಗಳು ಭಾಗಿಯಾಗಿವೆ. ಈ ವೇಳೆ ಸಂಚಾರ ಪೊಲೀಸರು ಕೆಲವು ಮಾರ್ಗಗಳಲ್ಲಿ ಸಂಚಾರ ನಿಯಂತ್ರಣ ಕೈಗೊಂಡಿದ್ದಾರೆ.

ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆ

ಕೇಂದ್ರ ಸರ್ಕಾರದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಪಿಂಕ್ ಲೈನ್‌ನ ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಿಸಲು ಮುಂದಾಗಿದೆ. ಈ ಹಿಂದೆ ತಾವರೆಕೆರೆ ಎಂದು ಗುರುತಿಸಲಾಗಿದ್ದ ನಿಲ್ದಾಣವನ್ನು ಎಸ್‌.ಜಿ. ಪಾಳ್ಯ (ಸುದ್ದುಗುಂಟೆ ಪಾಳ್ಯ) ಎಂದು ಬದಲಾಯಿಸಲಾಗಿದೆ. ಇದೇ ರೀತಿ ಜೆ.ಪಿ. ನಗರ 4ನೇ ಹಂತ ನಿಲ್ದಾಣವನ್ನು ಎನ್‌.ಎಸ್‌. ಪಾಳ್ಯ-ಜೆ.ಪಿ. ನಗರ 4ನೇ ಹಂತ ಎಂದೂ, ಐಐಎಂಬಿ ನಿಲ್ದಾಣವನ್ನು ಐಐಎಂಬಿ-ಬಿಳೇಕಹಳ್ಳಿ ಎಂದೂ ಮರುನಾಮಕರಣ ಮಾಡಲಾಗುತ್ತಿದೆ.

ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಇಂದು ಚಾಲನೆ ದೊರೆಯಲಿದ್ದು, ಶನಿವಾರ ಬೆಳಗ್ಗಿನಿಂದ ಪ್ರಯಾಣಿಕರಿಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಸಿಗಲಿದೆ. ಹಲವು ವರ್ಷಗಳಿಂದ ಈ ಮಾರ್ಗದ ಆರಂಭಕ್ಕಾಗಿ ಕಾಯುತ್ತಿದ್ದ ಸ್ಥಳೀಯರು ಮತ್ತು ಮೆಟ್ರೋ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us