ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. 5 ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಪ್ರಧಾನಿ ಮೋದಿ ಅವರು ಅನೇಕ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡ ಪ್ರಭು, ಬೆಂಗಳೂರು ನಿಮಾತೃ ಕೇಂಪೇಗೌಡ ಅವರ ಮುಗಿಲೆತ್ತರದ, ಅತಿ ದೊಡ್ಡ ಪ್ರತಿಮೆ ಅನಾವರಣ ಗೊಳಿಸಲಿದ್ದಾರೆ.
ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಪಟ್ಟಿ ಹೀಗಿದೆ
ನವೆಂಬರ್ 11ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದು 5 ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಶಾಸಕರ ಭವನದ ಆವರಣದಲ್ಲಿ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದು ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಟರ್ಮಿನಲ್-2 ಲೋಕಾರ್ಪಣೆ ಮಾಡಿ ನಂತರ ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ, ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ನಂತರ ವಿಮಾನ ನಿಲ್ದಾಣದ ಸಮೀಪದ ಕೆಎಸ್‌ಎಸ್‌ಐಡಿಎಲ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಇನ್ನು ಪ್ರಧಾನಿ ಮೋದಿಗಾಗಿ ಕೆಂಪೇಗೌಡ ಪೇಟ ಸಿದ್ದವಾಗಿದೆ. ಮೈಸೂರು ಕಲಾವಿದ ನಂದನ್ ಅವರು ಪೇಟ ಸಿದ್ದಪಡಿಸಿದ್ದಾರೆ. ಮೈಸೂರು ರೇಷ್ಮೆ ಬನಾರಸ್ ಬಟ್ಟೆ ಬಳಸಿ ಕೆಂಪು ಬಣ್ಣದ ಕೆಂಪೇಗೌಡರು ಧರಿಸುತ್ತಿದ್ದ ಮಾದರಿ ಪೇಟ ತಯಾರಿಸಲಾಗಿದ್ದು ಮೈಸೂರು ಕೆಂಪೇಗೌಡ ಅಭಿಮಾನಿಗಳು ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸಲಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:05 am, Sat, 5 November 22