ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಕ್ಕಳನ್ನ ಮಾರಾಟ ಮಾಡುತ್ತಿದ್ದ ಗ್ಯಾಂಗ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಡವರಿಂದ ಕಡಿಮೆ ಹಣಕ್ಕೆ ಮಕ್ಕಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಮಕ್ಕಳಿಲ್ಲದ ಪೋಷಕರನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಈ ದಂಧೆಗೆ ಇಳಿದಿದ್ದಾರೆ. 2ರಿಂದ 3 ಲಕ್ಷ ರೂ.ಗೆ ಮಕ್ಕಳನ್ನು ಮಾರುತ್ತಿದ್ದ ಗ್ಯಾಂಗ್ನ ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
13 ಮಕ್ಕಳ ರಕ್ಷಣೆ
ದೇವಿಷಣ್ಮುಗಮ್ಮ, ಮಹೇಶ್ ಕುಮಾರ್, ಜನಾರ್ಧನ್, ರಂಜನಾ ದೇವಿಪ್ರಸಾದ್, ಧನಲಕ್ಷ್ಮೀ ಬಂಧಿತ ಆರೋಪಿಗಳು. ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿ, ಪೊಲೀಸರು ಸುಮಾರು 13 ಮಕ್ಕಳನ್ನು ರಕ್ಷಿಸಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 11 ಮಕ್ಕಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಇನ್ನೂ 18 ಮಕ್ಕಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ದಕ್ಷಿಣ ಪೊಲೀಸರ ಬಹು ದೊಡ್ಡ ಕಾರ್ಯಾಚರಣೆಯಲ್ಲಿ ಸುಮಾರು 13 ಮಕ್ಕಳನ್ನು ರಕ್ಷಿಸಲಾಗಿದೆ. ಬಾಡಿಗೆ ತಾಯಿ ಮೂಲಕ ಮಕ್ಕಳು ಕೊಡುತ್ತೀವಿ ಅಂತ ಲಕ್ಷ ಲಕ್ಷ ಹಣ ವಸೂಲಿ ಮಾಡಿ ವಂಚನೆ ಮಾಡುತ್ತಿದ್ದರು. ಬಡ ಕುಟಂಬದ ಮಕ್ಕಳನ್ನ ಕಡಿಮೆ ಹಣಕ್ಕೆ ಖರೀದಿಸಿ ಮಾರಾಟ ಮಾಡುತ್ತಿದ್ದರು. ಬಾಡಿಗೆ ತಾಯಿ ಮೂಲಕ ಮಗು ಆಗಿದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯವರಿಗೆ ಈ ತಂಡ ವಂಚಿಸುತ್ತಿತ್ತು.
ಹಣ ಪಡೆದು ಮಗು ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಮಕ್ಕಳ ದಂಧೆ ಮೇಲೆ ಡಿಸಿಪಿ ಹರೀಶ್ ಪಾಂಡೆ ಕಣ್ಣಿಟ್ಟಿದ್ದರು. ಹರೀಶ್ ಪಾಂಡೆ ನೇತೃತ್ವದಲ್ಲಿ ಇದಕ್ಕಿದ್ದಂತೆ ವಿಶೇಷ ತಂಡ ರಚನೆಯಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ, ಚಾಮರಾಜಪೇಟೆ ಅಸ್ಪತ್ರೆಯಿಂದ ಒಂದು ಮಗು ಕಳ್ಳತನ ಮಾಡಿ ಮಾರಾಟ ಮಾಡಿದ್ರು. ಆ ಕೇಸ್ ಬಗ್ಗೆ ಬಸವನಗುಡಿ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ತನಿಖೆ ನಡೆಸಿದ್ರು. ತನಿಖೆ ವೇಳೆ ಅಸ್ಪತ್ರೆಯಲ್ಲಿ ರೋಗಿ ಮತ್ತು ಅಸ್ಪತ್ರೆಯವರು ಹೊರತುಪಡಿಸಿ ಬೇರೆಯವರು ಓಡಾಡುತ್ತಿದ್ದಾರೆ ಅಂತ ಪರಿಶೀಲಿಸಿದ್ದೆವು. ಈ ವೇಳೆ ಮಕ್ಕಳ ಮಾರಾಟದ ನಾಲ್ಕು ಕೇಸ್ ಬಗ್ಗೆ ಮಾಹಿತಿ ಸಿಕ್ಕಿತ್ತು ಅಂತ ತಿಳಿಸಿದರು.
ಬೆಂಗಳೂರಿನಿಂದ ಚೆನ್ನೈ ಮತ್ತು ಬೆಂಗಳೂರಿನಿಂದ ಮಹಾರಾಷ್ಟ್ರ ಕಡೆಗೆ ಮಗು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖೆ ವೇಳೆ ಓರ್ವ ಮಹಿಳೆ ಮನೆಯಲ್ಲಿ 28 ತಾಯಿ ಕಾರ್ಡ್ ಸಿಕ್ಕಿತ್ತು. ಅದು ಕೆಂಗೇರಿ ಅಸ್ಪತ್ರೆಯಿಂದ ಕಾರ್ಡ್ ಕೊಟ್ಟಿದ್ರು. ಈ ಕಾರ್ಡ್ ಯಾರಿಗೆ ಮಾರಾಟ ಮಾಡಿದ್ರು, ಅವರ ತಂದೆ ತಾಯಿಯನ್ನ ಬಯೋಲಾಜಿಕಲ್ ಪೋಷಕರು ಅಂತ ಮಾರಾಟ ಮಾಡಿದ್ರು. ಈ ಜಾಲದಲ್ಲಿ 11 ಮಕ್ಕಳನ್ನ ರಾಜ್ಯದಲ್ಲಿ ಪತ್ತೆಹಚ್ಚಲಾಗಿದೆ. ಐವರನ್ನ ಈಗಾಗಲೇ ಬಂಧಿಸಲಾಗಿದೆ. ಮಕ್ಕಳ ಪೋಷಕರು ಸಹ ಪತ್ತೆಯಾಗಿದ್ದಾರೆ. ಇನ್ನೂ ಕೆಲವು ಮಕ್ಕಳನ್ನ ಪತ್ತೆ ಹಚ್ಚಬೇಕಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.
ಇದನ್ನೂ ಓದಿ
ಪ್ರಕೃತಿ ಪ್ರಿಯರಿಂದ ಪಂಚಗಿರಿಗಳಿಗೆ ಭಾರೀ ಬೇಡಿಕೆ; ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲು ಸಜ್ಜುಗೊಂಡ ಅರಣ್ಯ ಇಲಾಖೆ
ಕೆಲವೇ ವಾರಗಳಲ್ಲಿ ಸುಮಾರು 19 ಬಿಲಿಯನ್ ಡಾಲರ್ ಕಳೆದುಕೊಂಡಿರುವ ಝಕರ್ಬರ್ಗ್ ಸಿರಿವಂತಿಕೆ ಕರಗುತ್ತಿದೆ!
Published On - 11:06 am, Wed, 6 October 21