ಪ್ರಕೃತಿ ಪ್ರಿಯರಿಂದ ಪಂಚಗಿರಿಗಳಿಗೆ ಭಾರೀ ಬೇಡಿಕೆ; ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲು ಸಜ್ಜುಗೊಂಡ ಅರಣ್ಯ ಇಲಾಖೆ
ಈಗಾಗಲೇ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಹಾಗೂ ಆವುಲಬೆಟ್ಟಕ್ಕೆ, ಪರಿಸರ ಪ್ರವಾಸೋದ್ಯಮದಡಿ ಅರಣ್ಯ ಇಲಾಖೆ ಸಾರ್ವಜನಿಕರ ಪ್ರವಾಸಕ್ಕೆ ಅವಕಾಶ ನೀಡಿದೆ. ಎರಡು ಗಿರಿಧಾಮಗಳಲ್ಲಿ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದಾರೆ. ಪ್ರವೇಶ ಶುಲ್ಕದ ಹೆಸರಿನಲ್ಲಿ ಸರ್ಕಾರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.
ಚಿಕ್ಕಬಳ್ಳಾಪುರ: ದಿನೇ ದಿನೇ ಅರಣ್ಯ ಪ್ರವಾಸೋದ್ಯಮಕ್ಕೆ ಬೇಡಿಕೆ ಬರುತ್ತಿರುವ ಹಿನ್ನಲೆ, ರಾಜಧಾನಿ ಪಕ್ಕದಲ್ಲೇ ಇರುವ ಪಂಚಗಿರಿಗಳ ಸಾಲನ್ನು ಅರಣ್ಯ ಪ್ರವಾಸೋದ್ಯಮ ಮಂಡಳಿಯ ವ್ಯಾಪ್ತಿಗೆ ತಂದು ಪ್ರಕೃತಿ ಪ್ರಿಯರು, ಚಾರಣಿಗರು, ಪ್ರವಾಸಿಗರಿಗೆ ಮುಕ್ತ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಕಾಂಕ್ರೀಟ್ ನಾಡಿನಿಂದ ಕೆಲ ಹೊತ್ತು ಆಚೆ ಹೋಗಿ ಸ್ವಚ್ಛಂದ ಪರಿಸರದಲ್ಲಿ ಕಾಲ ಕಳೆಯಬೇಕು. ಸುಂದರ ಪ್ರಕೃತಿಯಲ್ಲಿ ಕೆಲಕಾಲ ವಿಹರಿಸಬೇಕು ಎನ್ನುವ ಪ್ರಕೃತಿ ಪ್ರೀಯರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
ರಾಜಧಾನಿ ಬೆಂಗಳೂರಿನಿಂದ ಕೂದಲಳತೆ ದೂರದಲ್ಲಿರುವ ನಂದಿಗಿರಿಧಾಮದ ಸುತ್ತಮುತ್ತ ಇರುವ ದಿವ್ಯಾಗಿರಿ, ವಿಷ್ಣುಗಿರಿ, ಕುಷ್ಮಂಡಗಿರಿ, ಚನ್ನಗಿರಿಗಳಲ್ಲಿ ಚಾರಣಕ್ಕೆ ಅವಕಾಶ ನೀಡಲು ಹಾಗೂ ಅರಣ್ಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದ್ದು, ನಂದಿಗಿರಿಧಾಮ ಸುತ್ತಮುತ್ತಲಿರುವ ಗಿರಿಧಾಮಗಳಲ್ಲಿ ಸಾರ್ವಜನಿಕರ ಪ್ರವಾಸಕ್ಕೆ ಅನುಮತಿ ನೀಡಲು ಯೋಜನೆ ರೂಪಿಸಿದೆ. ಇನ್ನೂ ಅನುಮತಿಯಿಂದ ಸಾಧಕ-ಬಾಧಕಗಳ ಅಧ್ಯಯನ ನಡೆಸಿದೆ. ಅಲ್ಲದೆ ಅರಣ್ಯ ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಹೆಚ್ಚಿನ ಲಾಭದ ನಿರೀಕ್ಷೆ ಮಾಡಲಾಗಿದೆ ಎಂದು ಪರಿಸರ ಪ್ರವಾಸೋಧ್ಯಮ ಮಂಡಳಿ ಅಧ್ಯಕ್ಷರಾದ ಮದನ್ ಗೋಪಾಲ್ ಹೇಳಿದ್ದಾರೆ.
ಈಗಾಗಲೇ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಹಾಗೂ ಆವುಲಬೆಟ್ಟಕ್ಕೆ, ಪರಿಸರ ಪ್ರವಾಸೋದ್ಯಮದಡಿ ಅರಣ್ಯ ಇಲಾಖೆ ಸಾರ್ವಜನಿಕರ ಪ್ರವಾಸಕ್ಕೆ ಅವಕಾಶ ನೀಡಿದೆ. ಎರಡು ಗಿರಿಧಾಮಗಳಲ್ಲಿ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದಾರೆ. ಪ್ರವೇಶ ಶುಲ್ಕದ ಹೆಸರಿನಲ್ಲಿ ಸರ್ಕಾರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಇನ್ನೂ ಪಂಚಗಿರಿಗಳ ಸಾಲಿನಲ್ಲಿ ಕಂಡು ಬರುವ ತುಂತುರು ಮಳೆ, ಮಂಜಿನಾಟ, ಬೆಳ್ಳಿಮೋಡಗಳ ನೀನಾದ, ಆಕಾಶ-ಭೂಮಿ ಒಂದಾಗಿ ಹಾಲಿನ ನೊರೆಯಂತೆ ಭಾಸವಾಗ್ತಿರುವ ದೃಶ್ಯಗಳಿಗೆ ಪ್ರವಾಸಿಗರು ಮನಸೋತಿದ್ದಾರೆ. ಆದರೆ ಇರೊ ಬರೊ ಅರಣ್ಯ ಬೆಟ್ಟಗಳನ್ನು ಪ್ರವಾಸಕ್ಕೆ ಮುಕ್ತ ಮಾಡುವುದರಿಂದ ಅರಣ್ಯ ಅಪಾಯವಿದೆ ಎಂದು ಪರಿಸರ ಪ್ರಿಯರಾದ ಸದಾಶಿವಾ ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಪಂಚಗಿರಿಗಳ ಸಾಲು ರಾಜಧಾನಿ ಬೆಂಗಳೂರಿಗೆ ಹತ್ತಿರ ಇರುವ ಕಾರಣ, ಪ್ರಕೃತಿ ಪ್ರಿಯರು, ಪ್ರವಾಸಿಗರು ಹಾಗೂ ಚಾರಣಿಗರ ಮೆಚ್ಚುಗೆ ಪಡೆದಿವೆ. ಗಿರಿಸಾಲುಗಳಲ್ಲಿ ಕಂಡು ಬರುವ ಸುಂದರ ಪ್ರಕೃತಿ ವೈಭವ, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎನ್ನುವುದು ಮಾತ್ರ ಸತ್ಯ.
ವರದಿ: ಭೀಮಪ್ಪ ಪಾಟೀಲ್
ಇದನ್ನೂ ಓದಿ: ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮ ಅಗತ್ಯ: ವಿಶ್ವ ಪ್ರವಾಸೋದ್ಯಮ ದಿನದಂದು ಹಲವು ಸಚಿವರ ಪ್ರತಿಕ್ರಿಯೆ