ಕುಮಾರಸ್ವಾಮಿ ಲೇಔಟ್​ನಲ್ಲಿ ದಂಪತಿ ಕೊಲೆ ಕೇಸ್; ಮನೆ ಬಾಡಿಗೆಗಿದ್ದ ನಾಲ್ವರು ಅರೆಸ್ಟ್

| Updated By: sandhya thejappa

Updated on: Aug 24, 2021 | 10:45 AM

ಕಳೆದ 20 ವರ್ಷಗಳಿಂದ ಕಾಶಿನಗರದಲ್ಲಿ ವಾಸವಿದ್ದ ಬಿಎಂಟಿಸಿ ನಿವೃತ್ತ ಉದ್ಯೋಗಿ ಶಾಂತರಾಜು(65) ಮತ್ತು ಪ್ರೇಮಲತಾ(62) ಕೊಲೆಯಾದ ದಂಪತಿ.

ಕುಮಾರಸ್ವಾಮಿ ಲೇಔಟ್​ನಲ್ಲಿ ದಂಪತಿ ಕೊಲೆ ಕೇಸ್; ಮನೆ ಬಾಡಿಗೆಗಿದ್ದ ನಾಲ್ವರು ಅರೆಸ್ಟ್
ಆರೋಪಿಗಳನ್ನ ಬಂಧಿಸಿ 193 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ
Follow us on

ಬೆಂಗಳೂರು: ಕುಮಾರಸ್ವಾಮಿ ಲೇಔಟ್​ನಲ್ಲಿ (Kumaraswamy Layout) ನಡೆದ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣಸ್ವಾಮಿ, ರಾಮು ಅಲಿಯಾಸ್ ರಾಮಸ್ವಾಮಿ, ಆಸಿಫ್, ಗಂಗಾಧರ್ ಬಂಧಿತ ಆರೋಪಿಗಳು. 12 ವರ್ಷದ ಹಿಂದೆ ದಂಪತಿ ಮನೆಯಲ್ಲಿ ಆರೋಪಿಗಳು ಬಾಡಿಗೆಗಿದ್ದರು. ಆಗಾಗ ದಂಪತಿಯ ಮನೆಗೆ ಆರೋಪಿಗಳು ಬಂದು ಹೋಗುತ್ತಿದ್ದರು. ಆಗಸ್ಟ್ 20ರಂದು ದಂಪತಿಯನ್ನು ಕೊಲೆಗೈದು ಚಿನ್ನಾಭರಣವನ್ನು ದರೋಡೆ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ 193 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ನಗರವೇ ಬೆಚ್ಚಿಬೀಳುವಂತಹ ಘಟನೆ ಆಗಸ್ಟ್ 20ರಂದು ನಡೆದಿತ್ತು. ಹಾಡಹಗಲೇ ವೃದ್ಧ ದಂಪತಿಯನ್ನು ನಾಲ್ವರು ಕೊಲೆ ಮಾಡಿದ್ದರು. ಕಳೆದ 20 ವರ್ಷಗಳಿಂದ ಕಾಶಿನಗರದಲ್ಲಿ ವಾಸವಿದ್ದ ಬಿಎಂಟಿಸಿ ನಿವೃತ್ತ ಉದ್ಯೋಗಿ ಶಾಂತರಾಜು(65) ಮತ್ತು ಪ್ರೇಮಲತಾ(62) ಕೊಲೆಯಾದ ದಂಪತಿ. ಕುತ್ತಿಗೆ ಕೊಯ್ದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಚಿನ್ನಾಭರಣ, ಹಣ ದೋಚುವ ಉದ್ದೇಶದಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಒಂದು ಮನೆಯಲ್ಲಿ ತಾವಿದ್ದು, 2 ಮನೆ ಬಾಡಿಗೆಗೆ ನೀಡಿದ್ದ ಈ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ಸಾಕು ಮಗಳು ಇರುವುದಾಗಿ ನೆರೆಹೊರೆಯವರು ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ವೃದ್ಧೆ ಪ್ರೇಮಲತಾ ಕುತ್ತಿಗೆಗೆ ಕೇಬಲ್ ವೈರ್ ಬಿಗಿದು ಕೊಲೆ ಮಾಡಲಾಗಿತ್ತು. ಶಾಂತರಾಜುಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಪ್ರತ್ಯೇಕ ಕೊಠಡಿಯಲ್ಲಿ ಶಾಂತರಾಜು, ಪ್ರೇಮಲತಾ ಶವ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ಪ್ರಕರಣ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿತ್ತು.

12 ವರ್ಷದ ಹಿಂದೆ ಮೃತರ ಮನೆಯಲ್ಲಿ ಬಾಡಿಗೆ ಇದ್ದ ಆರೋಪಿಗಳು, ಕಳೆದ ಕೆಲವು ವರ್ಷದ ಹಿಂದೆ ಮನೆ ಖಾಲಿ ಮಾಡಿದ್ದರು. ಆದರೆ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ದಂಪತಿ ಮನೆಯಲ್ಲಿದ್ದ ಚಿನ್ನಕ್ಕೆ ಆಸೆ ಬಿದ್ದಿದ್ದ ಆರೋಪಿಗಳು ಆಗಸ್ಟ್ ಮೊದಲ ವಾರದಲ್ಲೇ ಚಿನ್ನ ಕಳವಿಗೆ ಸ್ಕೆಚ್ ಹಾಕಿದ್ದರು. ಚಿನ್ನಾಭರಣ ಸಮೇತ ದಂಪತಿ ಮದುವೆಗೆ ಹೋಗಿದ್ದರು. ಈ ಕಾರಣಕ್ಕೆ ಆ ದಿನ ಪ್ಲ್ಯಾನ್ ಕೈಬಿಟ್ಟಿದ್ದರು. ಮತ್ತೆ ಪ್ಲಾನ್ ಮಾಡಿ ಆ.20ರಂದು ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ

Bengaluru Crime: ಬೆಂಗಳೂರಿನಲ್ಲಿ ಹಾಡಹಗಲೇ ವೃದ್ಧ ದಂಪತಿಯ ಕೊಲೆ; ಪೊಲೀಸರಿಂದ ಚುರುಕಿನ ತನಿಖೆ

ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

(Police have arrested four accused in murder of the couple in Kumaraswamy Layout)