ಬೆಂಗಳೂರು, ಜುಲೈ 31: ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಓವರ್(Electronic City Flyover) ಮೇಲೆ ಮಧ್ಯರಾತ್ರಿ ಕೆಲವರು ಕುಡಿದು ಕುಪ್ಪಳಿಸಿ ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಳಿಕ ಪ್ರಯಾಣಿಕರ ಸುರಕ್ಷತೆ ಮತ್ತು ಪೊಲೀಸರಿಂದ ಹೆಚ್ಚಿನ ರಾತ್ರಿ ಗಸ್ತು ಅಗತ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ರಾತ್ರಿ ಗಸ್ತಿಗೆ ಪೊಲೀಸರು ಮುಂದಾಗಿದ್ದಾರೆ.
ಪಾರ್ಟಿ ಮಾಡಲು ಫ್ಲೈ ಓವರ್ ಮೇಲೆ ಬಂದಿದ್ದವರು ತಮ್ಮ ಕಾರನ್ನು ಸೈಡಿಗೆ ಹಾಕಿ ರಸ್ತೆಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಅಲ್ಲದೆ ಮದ್ಯದ ಬಾಟಲಿಗಳು, ತಿಂಡಿ ಪ್ಯಾಕ್‌ಗಳು ಮತ್ತು ಇತರ ವಸ್ತುಗಳನ್ನು ಅಲ್ಲೇ ಬಿಸಾಡಿ ತೆರಳಿದ್ದಾರೆ. ಇಲ್ಲಿ ಸುಮಾರು 10-ಕಿಮೀ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳು ಗರಿಷ್ಠ ವೇಗದಲ್ಲಿ ಚಲಿಸುತ್ತವೆ. ಸೆಪ್ಟೆಂಬರ್ 2021 ರಲ್ಲಿ ಯುವಕ-ಯುವತಿ ತಮ್ಮ ಬೈಕ್ ಅನ್ನು ಸೈಡಿಗೆ ನಿಲ್ಲಿಸಿ ಇದೇ ಫ್ಲೈ ಓವರ್ ಮೇಲೆ ನಿಂತಿದ್ದಾಗ ಅವರ ಮೇಲೆ ಕಾರು ಹರಿದ ಘಟನೆ ನಡೆದಿತ್ತು. ಆದ್ರೆ ಈಗ ಫ್ಲೈ ಓವರ್ ಮೇಲೆ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಪೊಲೀಸರ ಮೇಲೆ ಕಿಡಿಕಾರಿದ್ದಾರೆ. ಬೆಂಗಳೂರು ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು, ಈ ಬಗ್ಗೆ ಪರಿಶೀಲನೆ ನಡೆಸಿ ಹೊಯ್ಸಳ ವಾಹನಗಳ ರಾತ್ರಿ ಗಸ್ತು ಹೆಚ್ಚಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಗೊಂದಲ: ಕ್ಯಾಶ್ಬ್ಯಾಕ್ ಮಾಡಲಾಗುವುದು ಎಂದ ಕೆ.ಜೆ.ಜಾರ್ಜ್
ಸಾಮಾನ್ಯ ಸಮಯದಲ್ಲಿ, ಹೊಯ್ಸಳ ವಾಹನಗಳು ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯಲ್ಲಿ ವಿಶೇಷವಾಗಿ ರಾತ್ರಿಯಲ್ಲಿ ಸಂಚರಿಸುವುದಿಲ್ಲ. ಅಪಘಾತ ಸಂಭವಿಸಿದಾಗ ಅಥವಾ ವಾಹನವು ಮೇಲ್ಸೇತುವೆ ಮಧ್ಯದಲ್ಲಿ ಕೆಟ್ಟು ನಿಂತಾಗ ಪೊಲೀಸರು ಭೇಟಿ ನೀಡುತ್ತಾರೆ. ಆದರೆ ಈಗ ನಾವು ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯಲ್ಲಿ ರಾತ್ರಿ ಗಸ್ತು ಹಾಗೂ ವಿಶೇಷವಾಗಿ ವಾರಾಂತ್ಯದಲ್ಲಿ ರಾತ್ರಿ ಗಸ್ತು ತಿರುಗುವಂತೆ ಹೊಯ್ಸಳ ವಾಹನ ಸಿಬ್ಬಂದಿಗೆ ನಿರ್ದೇಶಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವಕರು ವೀಲಿಂಗ್ ಮಾಡುವ ಬಗ್ಗೆ ಅನೇಕ ಕರೆಗಳು ಬರುತ್ತಿದ್ದಾಗ ರಾತ್ರಿಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ಗೆ ಭೇಟಿ ನೀಡುತ್ತಿದ್ದವು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಅಂತಹ ದೂರುಗಳು ಕಡಿಮೆಯಾದ ಕಾರಣ, ನಾವು ರಾತ್ರಿ ಭೇಟಿ ನೀಡುವುದನ್ನು ನಿಲ್ಲಿಸಿದ್ದೇವೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:55 am, Mon, 31 July 23