ಕ್ಲಾರೆನ್ಸ್ ಶಾಲೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್: ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಪೊಲೀಸರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 25, 2022 | 1:05 PM

ಕ್ಲಾರೆನ್ಸ್ ಶಾಲೆಗೆ ಹಿಂದೂಪರ ಸಂಘಟನೆಗಳ ಭೇಟಿ ಸಾಧ್ಯತೆಯಿರುವ ಶಾಲೆಯ ನಾಲ್ಕೂ ಗೇಟ್​ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಕ್ಲಾರೆನ್ಸ್ ಶಾಲೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್: ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಪೊಲೀಸರು
ಪವಿತ್ರ ಬೈಬಲ್ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ನಗರದ ಕ್ಲಾರೆನ್ಸ್​ ಹೈಸ್ಕೂಲ್​ನಲ್ಲಿ ಬೈಬಲ್​ ಕಡ್ಡಾಯಗೊಳಿಸಿರುವ ವಿಚಾರ ಇದೀಗ ದೊಡ್ಡ ವಿವಾದವಾಗಿ ಬೆಳೆದಿದೆ. ಕ್ಲಾರೆನ್ಸ್ ಶಾಲೆಗೆ ಹಿಂದೂಪರ ಸಂಘಟನೆಗಳ ಭೇಟಿ ಸಾಧ್ಯತೆಯಿರುವ ಶಾಲೆಯ ನಾಲ್ಕೂ ಗೇಟ್​ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪುಲಕೇಶಿನಗರ ಠಾಣೆಯ ಪೊಲೀಸರು ಶಾಲೆಯ ಸಮೀಪ ಮೊಕ್ಕಾಂ ಮಾಡಿದ್ದಾರೆ. ಶಾಲೆಯ ಸುತ್ತಮುತ್ತ ಪ್ರತಿಭಟನೆಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಶಾಲೆಗೆ ಬೆಂಗಳೂರು ಉತ್ತರ ತಾಲ್ಲೂಕಿನ ಉಸ್ತುವಾರಿ ಬಿಇಒ ಜಯಶಂಕರ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಕ್ಲಾರೆನ್ಸ್​ ಹೈಸ್ಕೂಲ್ ಪ್ರಾಚಾರ್ಯರ ಜೊತೆಗೆ ಚರ್ಚೆ ನಡೆಸಿದರು. ಪ್ರೌಢಶಾಲೆಯಲ್ಲಿ ಎಷ್ಟು ವರ್ಷದಿಂದ ಬೈಬಲ್ ಬೋಧನೆ ನಡೆಯುತ್ತಿದೆ? ಶಾಲೆಯಲ್ಲಿರುವ ಕ್ರೈಸ್ತರು ಹಾಗೂ ಇತರ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎನ್ನುವ ಕುರಿತು ಸಂಜೆಯೊಳಗೆ ವರದಿ ನೀಡುವಂತೆ ಶಾಲೆಗೆ ಬಿಇಒ ಸೂಚನೆ ನೀಡಿದರು. ಸಂಜೆಯೊಳಗೆ ವರದಿ ನೀಡದಿದ್ದರೆ ಶಾಲೆಗೆ ನೊಟೀಸ್ ಜಾರಿ ಮಾಡಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಎಚ್ಚರಿಸಿದರು.

ಶಾಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಬೈಬಲ್ ಬೋಧಿಸಲಾಗುತ್ತಿದೆ ಎಂದು ಹಿಂದೂ ಜನ ಜಾಗೃತಿ ವೇದಿಕೆಯ ವಕ್ತಾರ ಮೋಹನ್ ಗೌಡ ಹೇಳಿದರು. ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡಲು ಇರಬೇಕು ಹೊರತು, ಮತಾಂತರ ಮಾಡಲು ಅಲ್ಲ. ಈ ಸಂಬಂಧ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇವೆ. ಮಕ್ಕಳಿಗೆ ಬಲವಂತವಾಗಿ ಬೈಬಲ್ ಬೋಧನೆ ಮಾಡುವುದು ನಿಲ್ಲಬೇಕು. ಈ ಬಗ್ಗೆ ಕ್ರಮ ಜರುಗಿಸಬೇಕು, ಸಮಗ್ರ ತನಿಖೆ ನಡೆಸಬೇಕು. ಮತಾಂತರಕ್ಕೆ ಅವಕಾಶ ಕೊಡುವುದಿಲ್ಲ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ನಗರದ ಕೆಲ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಬಲವಂತವಾಗಿ ಪ್ರಾರ್ಥನೆ ಮಾಡಿಸಲಾಗುತ್ತಿದೆ. ಇದು ಬಹಳ ಗಂಭೀರವಾದ ವಿಚಾರ. ನಾಳೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸುತ್ತೇವೆ. ಮಕ್ಕಳ ರಕ್ಷಣಾ ಕಾಯ್ದೆಯ ಅನ್ವಯ ಇದು ಅಪರಾಧ. ಶಾಲಾ ಆಡಳಿತ ಮಂಡಳಿ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

100 ವರ್ಷಗಳ ಇತಿಹಾಸ

ಬೆಂಗಳೂರಿನ ಕ್ಲಾರೆನ್ಸ್​ ಹೈಸ್ಕೂಲ್​ನಲ್ಲಿ 100 ವರ್ಷಗಳಿಂದ ಬೈಬಲ್ ಬೋಧನೆ ನಡೆಯುತ್ತಿದೆ ಎಂದು ಕ್ಲಾರೆನ್ಸ್ ಹೈಸ್ಕೂಲ್​ನ ಪ್ರಾಚಾರ್ಯರಾದ ಜೆರಿಽ ಜಾರ್ಜ್ ಮ್ಯಾಥ್ಯೂ ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ನಮ್ಮ ವಕೀಲರು ಉತ್ತರ ಕೊಡುತ್ತಾರೆ. ನಮ್ಮದು ಶಾಂತಿಯನ್ನು ಪ್ರೀತಿಸುವ ವಿದ್ಯಾಸಂಸ್ಥೆಯಾಗಿದೆ. ಶಾಲೆಯಲ್ಲಿನ ಬೈಬಲ್ ವಿಚಾರದ ಚರ್ಚೆ ನಮಗೆ ಬೇಸರ ತಂದಿದೆ. ಶಾಲಾ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸುತ್ತೇವೆ ಎಂದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.

ಇದನ್ನೂ ಓದಿ: ಬೆಂಗಳೂರಿನ ಶಾಲೆಯೊಂದರಲ್ಲಿ ಬೈಬಲ್ ಕಡ್ಡಾಯ ಆರೋಪ; ಕ್ರಮದ ಭರವಸೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಇದನ್ನೂ ಓದಿ: ಶಾಲೆಯಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ: ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ