ಮಾನವೀಯತೆ ಮೆರೆದ ಹೊಯ್ಸಳ ಸಿಬ್ಬಂದಿ: ಬಿಲ್ ಕಟ್ಟಲಾಗದೆ ಪರದಾಡುತ್ತಿದ್ದ ಮಹಿಳೆಗೆ ಹಣ ಸಹಾಯ
ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಪರದಾಡುತ್ತಿದ್ದ ಮಹಿಳೆಗೆ ಹೊಯ್ಸಳ ಸಿಬ್ಬಂದಿಯೇ ಹಣ ಸಹಾಯ ಮಾಡಿರುವ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು: ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಪರದಾಡುತ್ತಿದ್ದ ಮಹಿಳೆಗೆ ಹೊಯ್ಸಳ ಸಿಬ್ಬಂದಿಯೇ ಹಣ ಸಹಾಯ ಮಾಡಿರುವ ಅಪರೂಪದ ಘಟನೆ ನಗರದಲ್ಲಿ ನಡೆದಿದೆ. ಮಹಿಳೆಯ ಕಷ್ಟ ಆಲಿಸಿದ ವಿಜಯನಗರದ ಹೊಯ್ಸಳ ಸಿಬ್ಬಂದಿ ಸಹೋದ್ಯೋಗಿಗಳಿಂದ ₹ 10 ಸಾವಿರ ಹೊಂದಿಸಿ, ಇತರರಿಂದ ₹ 35 ಸಾವಿರ ಸಂಗ್ರಹಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ₹ 20 ಸಾವಿರ ಬಿಲ್ ಕಡಿಮೆ ಮಾಡಿಸಿದರು. ಬಳಿಕ ಮಹಿಳೆಯ ಬಳಿಯಿದ್ದ ₹ 70 ಸಾವಿರ ಪಡೆದು ಆಸ್ಪತ್ರೆಯ ಬಿಲ್ ಕಟ್ಟಿ ಆಕೆಯನ್ನು ಡಿಸ್ಚಾರ್ಜ್ ಮಾಡಿಸಿದರು. ವಿಜಯನಗರ ಎಎಸ್ಐ ಜಗದೀಶ್ ಹಾಗೂ ಎಸಿಪಿ ಮೋಹನ್ ಸಹ ಮಹಿಳೆಗೆ ನೆರವಾದರು.
ಈ ಕುರಿತು ಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಅಕೌಂಟ್ನಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ‘ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ₹ 1.25 ಲಕ್ಷ ಬಿಲ್ ಪಾವತಿಸಲು ಸಾಧ್ಯವಾಗದ ಮಹಿಳೆಯೊಬ್ಬರು ನಮ್ಮ-112ಗೆ ಕರೆ ಮಾಡಿ ಹೇಳಿಕೊಂಡಿದ್ದರು. ಹೊಯ್ಸಳ-87 ಸಿಬ್ಬಂದಿಗಳಾದ ಜಗದೀಶ್ ಎಎಸ್ಐ, ಮೋಹನ್ ಎಪಿಸಿ ಅವರು ಆಸ್ಪತ್ರೆಗೆ ಭೇಟಿ ನೀಡಿ ನೆರವಾಗಿದ್ದಾರೆ’ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.
137ಕ್ಕೂ ಹೆಚ್ಚು ಜನರು ಈ ಟ್ವೀಟ್ಗೆ ಲೈಕ್ ಮಾಡಿದ್ದಾರೆ. ಕೆಲವರಂತೂ ’ಹೀಗೂ ಉಂಟೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ತಂಡಕ್ಕೆ ಹ್ಯಾಟ್ಸಾಫ್’ ಎಂದು ಹಲವರು ಕೃತಜ್ಞತೆ ಹಂಚಿಕೊಂಡಿದ್ದಾರೆ. ಪ್ರಕಾಶ ಬಿರಾದರ ಎನ್ನುವವರು ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಪೊಲೀಸರ ಟ್ವೀಟ್ಗೆ ಹಲವರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದರ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅಶೋಕ್ ಎನ್ನುವವರು ‘ಒಳ್ಳೆಯ ಕೆಲಸ ಸರ್ ಕೇಳಿ ಖುಷಿ ಆಯ್ತು… ಆ ಮಹಿಳೆಯ ಕರೆ ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್’ ಎಂದಿದ್ದಾರೆ.
ಮಹಿಳೆಯೊಬ್ಬರು @vijayanagaraps ಸರಹದ್ದಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು 1.25 ಲಕ್ಷ ರೂ ಬಿಲ್ ಆಗಿದ್ದು, ಹಣವನ್ನು ಪಾವತಿಸಲು ಸಾಧ್ಯವಾಗದೇ ಇದ್ದ ಬಗ್ಗೆ ತಮ್ಮ ಸಮಸ್ಯೆಯನ್ನು ನಮ್ಮ-112 ಗೆ ಕರೆ ಮಾಡಿ ಹೇಳಿಕೊಂಡಿದ್ದು ಹೊಯ್ಸಳ-87 ಸಿಬ್ಬಂದಿಗಳಾದ ಜಗದೀಶ್ ಎಎಸ್ಐ, ಮೋಹನ್ ಎಪಿಸಿ ರವರುಗಳು,(1/2) pic.twitter.com/ydomw0J7fg
— Namma 112 (@Namma100) April 24, 2022
ಇದನ್ನೂ ಓದಿ: ಧನಂಜಯ ನಟನೆಯ ‘ಹೊಯ್ಸಳ’ ಚಿತ್ರಕ್ಕೆ ನೆರವೇರಿತು ಮುಹೂರ್ತ; ಯಾರೆಲ್ಲಾ ಭಾಗಿ?
ಇದನ್ನೂ ಓದಿ: ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಉರ್ದು ಶಾಲೆಯ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ; ಸ್ಥಳೀಯರ ಆಕ್ರೋಶ