
ಬೆಂಗಳೂರು, ಜೂನ್ 04: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆದುಕೊಂಡಿವೆ. ಸಿಎಂ ಡಿಕೆಶಿ ಜೊತೆ ನಿನ್ನೆ (ಜೂನ್ 03) ಡಿಸಿಎಂ ಆಗಿ ಡಾ.ಜಿ. ಪರಮೇಶ್ವರ್ ಮತ್ತು 12 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಮೊದಲ ಹಂತದಲ್ಲಿ ಕೆಲ ನಾಯಕರಷ್ಟೇ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಸಾಕಷ್ಟು ಚರ್ಚೆ ಬಳಿಕ ಈ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿತ್ತು. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆಯೇ ಹತ್ತು ಹಲವು ಲೆಕ್ಕಾಚಾರಗಳು ಶುರುವಾಗಿವೆ.
ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ಸಂಭವನೀಯ ಖಾತೆಗಳ ಬಗ್ಗೆಯೂ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರು ಸಚಿವ ಎಂ.ಬಿ.ಪಾಟೀಲ್, ಸಚಿವರಿಗೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಹೇಳಿದ್ದನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ ಎಂದಿದ್ದಾರೆ. ಯಾವುದೇ ಖಾತೆಯನ್ನು ಕೊಟ್ಟರೂ ನಾನು ನಿಭಾಯಿಸುತ್ತೇನೆ. ಖಾತೆ ಯಾವುದು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯ ಆಗುತ್ತೆ ಎಂದು ಮತ್ತೋರ್ವ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ; ಬಿಕೆ ಹರಿಪ್ರಾಸದ್ ಒಂದೇ ದಿನ ಡಬಲ್ ಧಮಾಕ
ಇನ್ನು ಡಿಕೆಶಿ ಸಂಪುಟಲ್ಲಿ ಸಚಿವರಾಗಲಿರುವ ಶಾಸಕರ ಎರಡನೇ ಪಟ್ಟಿಯನ್ನು ಹೈಕಮಾಂಡ್ ರಿಲೀಸ್ ಮಾಡಬೇಕಿದ್ದು, ಅದರಲ್ಲಿ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎಂಬುದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಂತೋಷ್ ಲಾಡ್ ಸೇರಿದಂತೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದ ಅನೇಕರು ಮತ್ತೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರೆ, ಮೊದಲ ಬಾರಿ ಶಾಸಕರಾದವರು ಮತ್ತು ಹಿರಿಯ ನಾಯಕರಾಗಿಯೂ ಈವರೆಗೆ ಸಚಿವ ಸ್ಥಾನ ಸಿಗದವರು ಕೂಡ ರೇಸ್ನಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್ ಲಾಡ್, ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇರಲಿದೆ ಎಂಬ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:17 pm, Thu, 4 June 26