ಬೆಂಗಳೂರು: ನಗರದ ದೇವಸ್ಥಾನಗಳಲ್ಲಿ ಫೋಟೋ, ಸೆಲ್ಫಿ ತೆಗೆದುಕೊಳ್ಳುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕಳ್ಳತನ, ನೂಕುನುಗ್ಗಲು, ಪೂಜೆಗೆ ಅಡೆತಡೆಯಾಗುತ್ತಿರುವ ಹಿನ್ನೆಲೆ ಇನ್ಮುಂದೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಅರ್ಚಕರಿಂದ ಒತ್ತಾಯ ಹೇಳಿ ಬಂದಿದೆ. ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟ ದೇವಸ್ಥಾನಗಳಲ್ಲಿ ಮೊಬೈಲ್ ಬ್ಯಾನ್ ಮಾಡಲು ನಿರ್ಧರಿಸಿದೆ. ಹಾಗಾಗಿ ತಮ್ಮ ಮನವಿಯನ್ನು ಮುಜರಾಯಿ ಇಲಾಖೆಯ ಮುಂದಿಟ್ಟಿದೆ.
ತಮಿಳುನಾಡಿನ ದೇಗುಲಗಳಲ್ಲಿ ಈಗಾಗಲೇ ಮೊಬೈಲ್ ಬಳಕೆ ಬ್ಯಾನ್ ಮಾಡಲಾಗಿದೆ. ಅದರಂತೆ ಕರ್ನಾಟಕದ ಮುಜರಾಯಿ ದೇಗುಲದಲ್ಲಿ ಮೊಬೈಲ್ ಬ್ಯಾನ್ ಮಾಡಬೇಕು. ಸದ್ಯ ದೇವಸ್ಥಾನಗಳಲ್ಲಿ ಅರ್ಚಕರ ಮೊಬೈಲ್ ಬಳಕೆಯನ್ನ ಮಾತ್ರ ಬ್ಯಾನ್ ಮಾಡಲಾಗಿದೆ. ಅದರಂತೆ ಭಕ್ತರಿಗೂ ಮೊಬೈಲ್ ಬ್ಯಾನ್ ಮಾಡಬೇಕು. ಮೊಬೈಲ್ ಬಳಕೆಯಿಂದ ದೇವಸ್ಥಾನಗಳಲ್ಲಿ ಸರಿಯಾಗಿ ಪೂಜೆಗಳನ್ನ ಮಾಡುವುದಕ್ಕೆ ಆಗುತ್ತಿಲ್ಲ. ವಿಡಿಯೋ ಮಾಡುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತಹ ಪ್ರಕರಣಗಳು ಹೆಚ್ಚಾಗಿವೆ. ಬೇರೆ ಭಕ್ತಾದಿಗಳಿಗೆ ಹಾಗೂ ಏಕಾಗ್ರತೆ ಪೂಜೆಗೂ ತೊಂದರೆಯಾಗುತ್ತಿದೆ. ಕೆಲವೊಬ್ಬರು ದೇವಸ್ಥಾನದ ಬಾಗಿಲು, ಹುಂಡಿಗಳ ಬೀಗದ ಫೋಟೋಗಳನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ದೇವಸ್ಥಾನಗಳಲ್ಲಿ ಕಳ್ಳತನ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಸದ್ಯ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ಎಂದು ಬರೆಯಲಾಗಿದೆ ಅಷ್ಟೇ. ಯಾವುದೇ ಆದೇಶದ ಪತ್ರವನ್ನ ನೀಡಿಲ್ಲ. ಹೀಗಾಗಿ ನಾವು ಭಕ್ತದಿಗಳಿಗೆ ಮೊಬೈಲ್ ಬಳಸಬೇಡಿ ಎಂದು ಹೇಳುವುದು ಕಷ್ಟ. ಆದ್ದರಿಂದ ಮುಜರಾಯಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲು ಅರ್ಚಕರ ಒಕ್ಕೂಟ ಮುಂದಾಗಿದೆ.
ಇದನ್ನೂ ಓದಿ: ಮಾತಾ ವೈಷ್ಣೋ ದೇವಿ ದೇಗುಲಕ್ಕೆ 87 ಲಕ್ಷ ಯಾತ್ರಾರ್ಥಿಗಳ ಆಗಮನ, ಡಿಸೆಂಬರ್ ಅಂತ್ಯಕ್ಕೆ 90 ಲಕ್ಷ ಏರಿಕೆಯಾಗುವ ನಿರೀಕ್ಷೆ
ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಮುಜುರಾಯಿ ಇಲಾಖೆಗೆ ಮನವಿ ಪತ್ರ ಕೊಟ್ಟಿದ್ವಿ. ಆದ್ರೆ ಯಾವುದೇ ಉತ್ತರಗಳು ಬಂದಿಲ್ಲ. ಇದೀಗಾ ಮತ್ತೆ ಮನವಿ ಪತ್ರವನ್ನ ನೀಡುತ್ತಿದ್ದೇವೆ. ಒಂದು ವಾರ ಮುಜುರಾಯಿ ಇಲಾಖೆಗೆ ಸಮಯವನ್ನ ಕೊಡುತ್ತಿದ್ದೇವೆ. ಒಂದು ವೇಳೆ ಅರ್ಚಕರ ಮನವಿಗೆ ಸ್ಪಂಧಿಸದೇ ಇದ್ರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಅರ್ಚಕರು ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:49 pm, Mon, 12 December 22