ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಜ್ಞಾನಿ ಡಾ.ರಾಮಕೃಷ್ಣರಾವ್(87) ನಿಧನರಾಗಿದ್ದಾರೆ. ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಡಾ.ರಾಮಕೃಷ್ಣರಾವ್ ಕನ್ನಡದ ಮಹಾನ್ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಮತ್ತು ಚಿಂತಕರಾಗಿ ಪ್ರಸಿದ್ಧರಾಗಿದ್ದರು.
ಹೊಳಲ್ಕೆರೆ ರಂಗರಾವ್ ರಾಮಕೃಷ್ಣ ರಾವ್ 1935ರ ಮೇ 31ರಂದು ಜನಿಸಿದರು. ಇವರ ತಂದೆ ಹೆಚ್. ವಿ. ರಂಗರಾವ್ ಚಿತ್ರದುರ್ಗದ ಚೀರನಹಳ್ಳಿ ಮತ್ತು ಕುಡಿನೀರಕಟ್ಟೆ ಗ್ರಾಮಗಳಲ್ಲಿ ಶ್ಯಾನುಭೋಗರಾಗಿದ್ದರು. ತಾಯಿ ರಾಧಮ್ಮ. ಡಾ.ರಾಮಕೃಷ್ಣರಾವ್, ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್ಸಿ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಹೆಚ್. ನರಸಿಂಹಯ್ಯ, ಜಿ.ಪಿ. ರಾಜರತ್ನಂ, ವಿ. ಸೀತಾರಾಮಯ್ಯ ಅಂತಹ ಮಹಾನ್ ಗುರುಗಳ ಆಪ್ತ ಶಿಷ್ಯರಾಗಿ ಭೇಷ್ ಎನಿಸಿಕೊಂಡಿದ್ದಾರೆ. ಅಲ್ಲದೆ ಪ್ರತಿಷ್ಟಿತ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿಗಳಾಗಿ ಮಹತ್ವದ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದರು.
ಕ್ರೈಸ್ಟ್ ಕಾಲೇಜಿನಲ್ಲಿ ಸುದೀರ್ಘ ಕಾಲದ ಅಧ್ಯಾಪನ ವೃತ್ತಿ ಪೂರ್ಣಗೊಳಿಸಿದ್ದಾರೆ. ಪ್ರವೃತ್ತಿಯಿಂದ ವಿಜ್ಞಾನ ಸಂವಹನಕಾರರು. ವಿಜ್ಞಾನದಲ್ಲಿ ವಿಶೇಷವಾಗಿ ಖಗೋಳ ವಿಜ್ಞಾನದಲ್ಲಿ ಪರಿಣಿತರಾಗಿದ್ದರು. ಸಂಕ್ಷಿಪ್ತ ಖಗೋಳ ವಿಜ್ಞಾನ ಪರಿಚಯ ಅವರ ಅತ್ಯಂತ ಜನಪ್ರಿಯ ಪುಸ್ತಕ. ಕಲಾಂ ಮೇಷ್ಟ್ರು, ಅವರ ಇನ್ನೊಂದು ಜನಪ್ರಿಯ ಪುಸ್ತಕ. ಹಲವಾರು ಡಾಕ್ಯುಮೆಂಟರಿಗಳನ್ನು ನಿರ್ಮಿಸಿದ್ದಾರೆ. ಅವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಆಕಾಶವಾಣಿಯೊಂದಿಗೆ ಸಂಪರ್ಕದಲ್ಲಿದ್ದು ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ವಿಶೇಷವಾಗಿ ನಕ್ಷತ್ರ ವೀಕ್ಷಣೆಯ ನೇರ ಪ್ರಸಾರದ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯವಾದವು. ಅವರ ಮನೆಯ ಮಹಡಿಯಲ್ಲಿ ಹಲವಾರು ಬಾರಿ ನಕ್ಷತ್ರ ವೀಕ್ಷಣೆಯ ಕಾರ್ಯಕ್ರಮಗಳನ್ನು ಹವ್ಯಾಸಿ ನೆಲೆಯಲ್ಲಿ ನಡೆಸಿಕೊಟ್ಟಿದ್ದಾರೆ. ಟಿವಿ ಚಾನಲ್ ಗಳ ಮೂಲಕ ನೂರಾರು ವಿಜ್ಞಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮವಾಗಿ ವಿಜ್ಞಾನ ವಿಷಯಗಳನ್ನು ನಾಡಿನ ಮನೆಮನೆಗೂ ತಲುಪಿಸಿದ್ದಾರೆ. ನೂರಾರು ಅಧ್ಯಾಪಕರ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಅಧ್ಯಾಪಕರಿಗರಿಗೆ ಮಾರ್ಗದರ್ಶನ ನೀಡಿದ್ದಾರೆ. ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಚರಿಸಿ ಅನೇಕ ವಿಜ್ಞಾನಿಗಳನ್ನು ಭೇಟಿ ಮಾಡಿ ಉತ್ತಮ ಜ್ಞಾನ ಪಡೆದಿದ್ದಾರೆ. ಸಾರ್ವಜನಿಕ ವೇದಿಕೆಗಳ/ ವಿಜ್ಞಾನ ಸಮ್ಮೇಳನಗಳ ಮುಖಾಂತರ ವಿಜ್ಞಾನದ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ.
‘ನಿಶ್ಶಬ್ದದೊಳಗಿನ ಶಬ್ದ’, ‘ಶಕ್ತಿಗಾಥೆ’, ‘ಪರಮಾಣು ಪ್ರಪಂಚ’ ಹಾಗೂ ‘ಅದೃಶ್ಯ ಬೆಳಕು–ಎಕ್ಸ್‌ರೇ’ ಸೇರಿದಂತೆ ಹಲವು ಕೃತಿಗಳನ್ನು ರಾಮಕೃಷ್ಣರಾವ್ ರಚಿಸಿದ್ದರು. ‘ಅಂತರಿಕ್ಷ’, ‘ಶುಕ್ರ ಸಂಕ್ರಮ’, ‘ಒಲವಿನ ಶಿಲೆ– ಅಯಸ್ಕಾಂತ್’, ‘ನಂಬಿಕೆ– ಮೂಢನಂಬಿಕೆ’, ‘ಕಲಾಂ ಮೇಷ್ಟ್ರು’ ಹಾಗೂ ‘ಕನ್ನಡದಲ್ಲಿ ವಿಜ್ಞಾನ ಸಂವಹನ’ ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದರು. ಬೆಂಗಳೂರಿನ ಪಿಯು ವಿದ್ಯಾರ್ಥಿಗಳಿಗಾಗಿ ಭೌತವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ರಚಿಸಿದ್ದರು.
Published On - 8:58 am, Tue, 13 September 22