PSI Recruitment Scam: ಪಿಎಸ್​ಐ ನೇಮಕಾತಿ ವಿಭಾಗದಲ್ಲಿ ಹಿಡಿದ ಸಾಧಿಸಿದ್ದ ಹಗರಣದ ಸೂತ್ರಧಾರ ಶಾಂತಕುಮಾರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 13, 2022 | 10:15 AM

ನೇಮಕಾತಿ ವಿಭಾಗದ ಡಿವೈಎಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತಕುಮಾರ್​ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಡಿಜಿಪಿ ಅಮ್ರಿತ್ ಪಾಲ್ ಅವರನ್ನೂ ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಲಾಗುತ್ತಿದೆ.

PSI Recruitment Scam: ಪಿಎಸ್​ಐ ನೇಮಕಾತಿ ವಿಭಾಗದಲ್ಲಿ ಹಿಡಿದ ಸಾಧಿಸಿದ್ದ ಹಗರಣದ ಸೂತ್ರಧಾರ ಶಾಂತಕುಮಾರ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಟಿವಿ9 ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಕಿಂಗ್​ಪಿನ್ ಶಾಂತಕುಮಾರ್​ನನ್ನು ಸಿಐಡಿ ಪೊಲೀಸರು ಬಂಧಿಸಿದರು. ನೇಮಕಾತಿ ವಿಭಾಗದ ಡಿವೈಎಸ್​ ಆಗಿ ಶಾಂತಕುಮಾರ್ ಕಾರ್ಯನಿರ್ವಹಿಸುತ್ತಿದ್ದರು. ಈ ಬಂಧನದೊಂದಿಗೆ ಎಡಿಜಿಪಿ ಅಮ್ರಿತ್ ಪಾಲ್ ಅವರನ್ನೂ ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಲಾಗುತ್ತಿದೆ. ಸಿಬಿಐ ವಿಚಾರಣೆ ವೇಳೆ ಡಿವೈಎಸ್​ಪಿ ಶಾಂತಕುಮಾರ್ ಮತ್ತಷ್ಟು ಸ್ಫೋಟಕ ಸತ್ಯಗಳನ್ನು ಬಾಯಿಬಿಡಬಹುದು ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ಸಿಐಡಿ ಬಂಧಿಸಿ ವಿಚಾರಣೆಗೆ ಒಳಪಡಿಸಬಹುದು.

ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಶಾಂತಕುಮಾರ್ ಬಂಧನದ ನಂತರ ನೇಮಕಾತಿ ಹಗರಣದ ಇತರ ಆಯಾಮಗಳು ಬೆಳಕಿಗೆ ಬರುವುದರೊಂದಿಗೆ ಹಲವು ಪ್ರಶ್ನೆಗಳೂ ಮೂಡಿವೆ. ಅಭ್ಯರ್ಥಿಗಳಿಗೆ ಕೊಡುತ್ತಿದ್ದ ಒಎಂಆರ್ ಶೀಟ್​ಗಳನ್ನು ತಿದ್ದುವ ಕೆಲಸದಲ್ಲಿ ಡೀಲ್ ಆಗಿದೆಯೇ? ಸೀಲ್ ಆಗಿ ಬರುತ್ತಿದ್ದ ಒಎಂಆರ್ ಶೀಟ್​ಗಳನ್ನೇ ಬದಲಿಸಲಾಗುತ್ತಿತ್ತೆ? ನೇಮಕಾತಿ ವಿಭಾಗವೇ ಅವ್ಯವಹಾರದ ಕೇಂದ್ರಬಿಂದುವಾಗಿದೆಯೇ ಎಂಬ ಪ್ರಶ್ನೆಗಳ ಬೆನ್ನುಹತ್ತಿ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ. ಬೆಂಗಳೂರಿನ ಕಾರ್ಲಟನ್ ಭವನದ ಸಿಐಡಿ ಕಚೇರಿಯಲ್ಲಿ ಬಂಧಿತ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಿಐಡಿಯ ವಿವಿಧ ತಂಡಗಳು ಕಾರ್ಯಚರಣೆ ನಡೆಸುತ್ತಿವೆ. ಬೆಂಗಳೂರಿನಲ್ಲಿ ಸಿಐಡಿ ಎಸ್​ಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಬಂಧಿತ ಶಾಂತಕುಮಾರ್ ಹಲವು ವರ್ಷಗಳಿಂದ ನೇಮಕಾತಿ ವಿಭಾಗದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ. ಈತನಿಗೆ ಹಲವು ಪಕ್ಷಗಳ ರಾಜಕಾರಿಣಿಗಳ ನಂಟು ಇದೆ ಎಂದು ಹೇಳಲಾಗಿದೆ. ಯಾವುದೇ ಪಕ್ಷ ಅಧಿಕಾರಿದಲ್ಲಿದ್ದರೂ ಶಾಂತಕುಮಾರ್ ಮಾತ್ರ ನೇಮಕಾತಿ ವಿಭಾಗದಲ್ಲೇ ಮುಂದುವರಿಯುತ್ತಿದ್ದ. ಇತರ ವಿಭಾಗಗಳಿಗೆ ಎತ್ತಂಗಡಿ ಮಾಡಿದರೂ ಏನಾದರೂ ಮಾಡಿ ಮತ್ತೆ ಮತ್ತೆ ನೇಮಕಾತಿ ವಿಭಾಗಕ್ಕೆ ವಾಪಾಸ್ ಬರುತ್ತಿದ್ದ. ಈ ಹಿಂದೆ ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಡಿಜಿಪಿ ಆಗಿದ್ದ ಅವಧಿಯಲ್ಲಿ ಶಾಂತಕುಮಾರ್​ನನ್ನು ಎತ್ತಂಗಡಿ ಮಾಡಲಾಗಿತ್ತು. ಈ ವೇಳೆ ಐಎಸ್​ಡಿಗೆ ವರ್ಗಾವಣೆಗೊಂಡು ಬಳಿಕ ಮತ್ತೆ ನೇಮಕಾತಿ ವಿಭಾಗಕ್ಕೆ ವಾಪಸ್ ಬಂದಿದ್ದ. ಡಿವೈಎಸ್​ಪಿ ಶಾಂತಕುಮಾರ್ ಮೇಲೆ ಸಿಐಡಿ ದಟ್ಟ ಅನುಮಾನ ಮೂಡಿದೆ. ಸಿಐಡಿ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿವೆ.

1996ರ ಬ್ಯಾಚ್​ನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯಲ್ಲಿ (CAR) ಕಾನ್​ಸ್ಟೆಬಲ್ ಆಗಿದ್ದ ಶಾಂತಕುಮಾರ್ ತಾಂತ್ರಿಕವಾಗಿ ಚುರುಕಾಗಿದ್ದ. 2006ರಲ್ಲಿ ಮೀಸಲು ಪಡೆಯ ಸಬ್​ಇನ್​ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಗುಲ್ಬರ್ಗದಲ್ಲಿ ಒಂದು ವರ್ಷ ತರಬೇತಿ ಮುಗಿಸಿದ ನಂತರ ತುಮಕೂರಿನಲ್ಲಿ ಎರಡು ವರ್ಷ ಪ್ರೊಬೆಷನರಿ ಅವಧಿ ಪೂರೈಸಿದ್ದ. ನಂತರ PSI ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಶಾಂತಕುಮಾರ್​ನನ್ನು ನೇಮಿಸಿದ್ದರು.

2007-08ರಿಂದ ಶಾಂತಕುಮಾರ್ ನೇಮಕಾತಿ ವಿಭಾಗದಲ್ಲೇ ಮುಂದುವರಿದಿದ್ದರು. ನೇಮಕಾತಿಯ ಒಳಹೊರಗೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತಿಳಿದಿದ್ದರು. ಕಳೆದ 2 ವರ್ಷಗಳ ಹಿಂದೆ ಡಿವೈಎಸ್​ಪಿ ಆಗಿ ಬಡ್ತಿ ಪಡೆದಿದ್ದರು. ಈ ಹೊತ್ತಿಗಾಗಲೇ ಇಡೀ ನೇಮಕಾತಿ ವಿಭಾಗದಲ್ಲಿ ಶಾಂತಕುಮಾರ್ ಹಿಡಿತ ಸಾಧಿಸಿದ್ದರು. ಸಿಐಡಿ ವಿಚಾರಣೆ ಬಳಿಕ ಶಾಂತಕುಮಾರ್ ಈವರೆಗೆ ಮಾಡಿರುವ ಅಕ್ರಮಗಳ ಸಂಪೂರ್ಣ ಮಾಹಿತಿ ಬೆಳಕಿಗೆ ಬರಲಿದೆ.

32 ಜನರ ಬಂಧನ

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಈವರೆಗೆ 32 ಆರೋಪಿಗಳನ್ನು ಬಂಧಿಸಿದೆ. ಈ ಪೈಕಿ 8 ಅಭ್ಯರ್ಥಿಗಳು ಸೇರಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಮತ್ತಷ್ಟು ಜನರ ಬಗ್ಗೆ ಸಿಐಡಿಯ ಒಂದು ತಂಡದಿಂದ ನಿರಂತರವಾಗಿ ಮಾಹಿತಿ, ಸಾಕ್ಷ್ಯ ಸಂಗ್ರಹಿಸುತ್ತಿದೆ. PSI ಪರೀಕ್ಷೆಯಲ್ಲಿ ಅಕ್ರಮವೆಸಗಿರುವ ಇನ್ನೂ ಕೆಲವರ ಬಂಧನ ನಿಶ್ಚಿತವಾಗಿದೆ. 2ನೇ ಹಂತದ ಕಾರ್ಯಾಚರಣೆಗೆ ಸಿಐಡಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Published On - 8:02 am, Fri, 13 May 22