ಬೆಂಗಳೂರು, ಅಕ್ಟೋಬರ್ 26: ತುರ್ತಾಗಿ ಎಲ್ಲಿಗೋ ಹೋಗಬೇಕಾಗಿರುವ ಸಂದರ್ಭದಲ್ಲಿ ಆನ್ಲೈನ್ ಆ್ಯಪ್ಗಳಲ್ಲಿ ಕ್ಯಾಬ್ ಅಥವಾ ಆಟೋ ಬುಕ್ ಮಾಡಿದರೆ ಚಾಲಕರು ಕ್ಯಾನ್ಸಲ್ ಮಾಡುವ ಕಿರಿಕಿರಿ ಪ್ರಯಾಣಿಕರಿಗೆ ತಪ್ಪಿದ್ದಲ್ಲ. ಈ ಸಮಸ್ಯೆಯ ನಿವಾರಣೆಗೆ ಆ್ಯಪ್ ಆಧಾರಿತ ಟ್ಯಾಕ್ಸಿ ಅಗ್ರಿಗೇಟರ್ ರ‍್ಯಾಪಿಡೋ (Rapido) ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭಿಸಿದೆ ಎಂದು ವರದಿಯಾಗಿದೆ. ರ‍್ಯಾಪಿಡೋದ ‘ಆಟೋ ಪ್ಲಸ್ (Auto plus)‘ ಸೇವೆಯು ಬುಕಿಂಗ್ ಮಾಡಿದ ನಂತರ ಚಾಲಕರು ಕ್ಯಾನ್ಸಲ್ ಮಾಡದಂತೆ ನಮಗೆ ಗ್ಯಾರಂಟಿ ಅಥವಾ ಖಾತರಿ ಒದಗಿಸುತ್ತದೆ.
ಆದಾಗ್ಯೂ, ಆಟೋ ಪ್ಲಸ್ ಸೇವೆಯು ಸಾಮಾನ್ಯ ಆಟೋ ದರಗಳಿಗೆ ಹೋಲಿಸಿದರೆ ಗ್ರಾಹಕರಿಗೆ 25 ರಿಂದ 30 ರಷ್ಟು ದುಬಾರಿಯಾಗಲಿದೆ ಎಂದು ‘ಮನಿ ಕಂಟ್ರೋಲ್’ ವರದಿ ತಿಳಿಸಿದೆ.
ರ‍್ಯಾಪಿಡೋ ಆಟೋ ದರ ರಾಜ್ಯ ಸರ್ಕಾರವು ನಿಗದಿಪಡಿಸಿದ ಕನಿಷ್ಠ ದರಕ್ಕಿಂತ ಹೆಚ್ಚಾಗಿರುತ್ತದೆ. ನವೆಂಬರ್ 2021 ರಲ್ಲಿ, ಸರ್ಕಾರವು ಮೊದಲ ಎರಡು ಕಿಲೋಮೀಟರ್‌ಗಳಿಗೆ ಕನಿಷ್ಠ ರೂ 30 ಮತ್ತು ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗಳಿಗೆ ರೂ 15 ಎಂದು ಆಟೋ ದರಗಳನ್ನು ನಿಗದಿಪಡಿಸಿತ್ತು. ಆಟೋ ರೈಡ್‌ಗಳಿಗೆ ಕನಿಷ್ಠ ದರವನ್ನು 33 ರೂ.ಗೆ ನಿಗದಿಪಡಿಸಲಾಗಿದೆ. ರ‍್ಯಾಪಿಡೋ ಸಂಸ್ಥೆಯು ಸಾಮಾನ್ಯ ಆಟೋ ರೈಡ್‌ಗಳಿಗೆ 46 ರೂ. ಮತ್ತು ಆಟೋ ಪ್ಲಸ್ ರೈಡ್‌ಗಳಿಗೆ 71 ರೂ.ಗಳನ್ನು ವಿಧಿಸುತ್ತದೆ ಎಂದು ‘ಮನಿ ಕಂಟ್ರೋಲ್’ ವರದಿ ಉಲ್ಲೇಖಿಸಿದೆ.
ಆಟೋ ಚಾಲಕರ ಒಕ್ಕೂಟ ಬೆಂಬಲಿತ ‘ನಮ್ಮ ಯಾತ್ರಿ’ ಆಟೋ ಅಪ್ಲಿಕೇಶನ್ ಸಹ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರವನ್ನು ವಿಧಿಸುತ್ತದೆ. ಓಲಾ ಮತ್ತು ಉಬರ್‌ನಲ್ಲಿನ ಆಟೋ ದರಗಳು ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಲೆಗಳನ್ನು ಅನುಸರಿಸುತ್ತವೆ.
ಕನಿಷ್ಠ ಶುಲ್ಕ ರೂ 100 ಮೀರಿದೆ ಎಂದು ಆರೋಪಿಸಿ ಹಲವಾರು ಗ್ರಾಹಕರು ದೂರುಗಳನ್ನು ಸಲ್ಲಿಸಿದ ನಂತರ ಕರ್ನಾಟಕ ಹೈಕೋರ್ಟ್ ನವೆಂಬರ್ 2021 ರಲ್ಲಿ ಆಟೋ ಸವಾರಿಗೆ ಕನಿಷ್ಠ ಶುಲ್ಕವನ್ನು ನಿಗದಿಪಡಿಸಿದೆ.
ಆಟೋ ಪ್ಲಸ್ ದರಗಳು ಸಮಯ, ಬೇಡಿಕೆ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ಪ್ರಸ್ತುತ, 10,000 ಕ್ಕೂ ಹೆಚ್ಚು ಆಟೋ ಚಾಲಕರು ‘ಆಟೋ ಪ್ಲಸ್’ ಸೇವೆಯ ಭಾಗವಾಗಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ 50,000 ಚಾಲಕರನ್ನು ಸೇವೆಗೆ ಸೇರಿಸಲು ಕಂಪನಿ ಯೋಜಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಹುಲಿ ಉಗುರು ವಿವಾದ: ಹಿಂದೂಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ: ಶಾಸಕ ಅರವಿಂದ ಬೆಲ್ಲದ್ ಆರೋಪ
ರ‍್ಯಾಪಿಡೋ ಹೇಳಿಕೆಯ ಪ್ರಕಾರ, ಚಾಲಕರು ಮತ್ತು ಗ್ರಾಹಕರು ಇಬ್ಬರೂ ಆಟೋ ಪ್ಲಸ್ ಸೇವೆಗಳಿಂದ ಪ್ರಯೋಜನ ಪಡೆಯುತ್ತಾರೆ. ಇದು ಗ್ರಾಹಕರಿಗೆ ಖಾತರಿಪಡಿಸಿದ ಪ್ರಹಯಾಣವನ್ನು ನೀಡುತ್ತದೆ ಮತ್ತು ಚಾಲಕರಿಗೆ ಆದಾಯ ಸ್ಥಿರತೆಯನ್ನು ಒದಗಿಸುತ್ತದೆ.
ಕಂಪನಿಯು ಸೆಪ್ಟೆಂಬರ್ 2023 ರಲ್ಲಿ ಹೈದರಾಬಾದ್‌ನಲ್ಲಿ ‘ಆಟೋ ಪ್ಲಸ್’ ಸೇವೆಯನ್ನು ಪ್ರಾರಂಭಿಸಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬೆಂಗಳೂರಿನಲ್ಲಿಯೂ ಸೇವೆ ಆರಂಭಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ