ಹುಲಿ ಉಗುರು ವಿವಾದ: ಹಿಂದೂಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ: ಶಾಸಕ ಅರವಿಂದ ಬೆಲ್ಲದ್ ಆರೋಪ
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪದಲ್ಲಿ ಹಲವರ ಮನೆ ಮೇಲೆ ರೇಡ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬರ, ವಿದ್ಯುತ್ ಸಮಸ್ಯೆ ಇರುವುದರಿಂದ ಗಮನ ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ಹುಲಿ ಉಗುರು ಪ್ರಕರಣವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಅಕ್ಟೋಬರ್ 26: ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪದಲ್ಲಿ ಹಲವರ ಮನೆ ಮೇಲೆ ರೇಡ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ (Arvind Bellad) ಆರೋಪ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ, ವಿದ್ಯುತ್ ಸಮಸ್ಯೆ ಇರುವುದರಿಂದ ಗಮನ ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ಹುಲಿ ಉಗುರು ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಾವು ಪತ್ರ ಬರೆದು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಎಲ್ಲರ ವಿರುದ್ಧವೂ ಸಮಾನವಾಗಿಯೇ ಕ್ರಮ ತೆಗೆದುಕೊಳ್ಳಬೇಕು. ಮುಸ್ಲಿಮರ ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಾರೆ. ದರ್ಗಾಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಿ. ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ ಕೇಸ್ ಹಾಕಬಾರದು. ನವಿಲು ಗರಿ ಇಟ್ಟುಕೊಂಡ ದರ್ಗಾ, ಮಸೀದಿ ಮೇಲೂ ದಾಳಿ ಮಾಡಿ. ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ. ಎಲ್ಲಾ ಮೌಲ್ವಿಗಳಿಗೂ ಏಳು ವರ್ಷಗಳ ಜೈಲು ಶಿಕ್ಷೆ ಕೊಡಿಸಿ. ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತಾ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ಸಲ್ಮಾನ್ ಖಾನ್ ರೀತಿ ಜಿಂಕೆ ಸಾಯಿಸಿ ಅದರ ಚರ್ಮ ಬಳಸಲ್ಲ. ಕಾನೂನು ಹಿಂದೂಗಳಿಗೆ ಅನ್ವಯಿಸಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತೆ ಎಂದಿದ್ದಾರೆ.
ಇದನ್ನೂ ಓದಿ: ನಕಲಿ ಹುಲಿ ಉಗುರಿನ ಪೆಂಡೆಂಟ್ ಕೂಡ ಧರಿಸಬೇಡಿ: ಸಚಿವ ಈಶ್ವರ ಖಂಡ್ರೆ ಮನವಿ
ಯಾರೂ ಜೀವಂತ ಹುಲಿಗಳಿಂದ ಉಗುರು ತಂದು ಹಾಕಿಕೊಂಡಿರಲ್ಲ. ಆ ತರಹದ ಶೂರರು ಯಾರೂ ಇಲ್ಲ. ಸತ್ತ ಹುಲಿಗಳಿಂದ ಉಗುರು ತಂದು ಹಾಕಿಕೊಂಡಿರಬಹುದು. ಹೆಚ್ಚಿನ ಜನ ಹುಲಿ ಉಗುರು ತರಹದ ಪ್ಲಾಸ್ಟಿಕ್ ಉಗುರು ಹಾಕಿರ್ತಾರೆ ಎಂದು ಹೇಳಿದ್ದಾರೆ.
ರಾಜಕೀಯ ದೃಷ್ಟಿಯಿಂದ ಕೈಗೊಳ್ಳದೆ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಲಿ
ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನವದೆಹಲಿಯ ಸುತ್ತಮುತ್ತ ನ್ಯಾಷನಲ್ ಕ್ಯಾಪಿಟಲ್ ರೀಜನ್ ಇದೆ. ಇದಕ್ಕೆ ದೆಹಲಿ, ಗುರುಗ್ರಾಮ ಹಾಗೂ ನೋಯ್ಡಾ ಸೇರಿಕೊಂಡಿದೆ. ಏನೇ ಅಭಿವೃದ್ಧಿ ಮಾಡಿದರೂ ಎನ್‌ಸಿಆರ್ ದೃಷ್ಟಿಯಲ್ಲಿ ಮಾಡುತ್ತಾರೆ.
ಇದನ್ನೂ ಓದಿ: ಹುಲಿ ಉಗುರು ವಿವಾದ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೂ ಹುಲಿ ಉಗುರು ಸಂಕಷ್ಟ
ನಮ್ಮ ರಾಜ್ಯದಲ್ಲೂ ಕರ್ನಾಟಕ ಕ್ಯಾಪಿಟಲ್ ರೀಜನ್ ಮಾಡಲಿ. ಬೆಂಗಳೂರಿನ ಸುತ್ತಮುತ್ತಲಿನ ನಗರ, ಗ್ರಾಮ ಸೇರಿಸಿ NCR ಮಾಡಲಿ. ರಾಮನಗರ, ಕೋಲಾರ, ತುಮಕೂರು, ಬೆಂಗಳೂರಿನ ಭಾಗ ಸೇರಿಸಲಿ. ಬೆಂಗಳೂರು ಬೆಳೆಯಬೇಕಾದರೆ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿ ಆಗಬೇಕು. ರಾಜಕೀಯ ದೃಷ್ಟಿಯಿಂದ ಕೈಗೊಳ್ಳದೆ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಲಿ ಎಂದರು.
ಈಗ ಕೇಳಿ ಬರುತ್ತಿರುವುದೆಲ್ಲವೂ ಊಹಾಪೋಹಗಳು, ಅಧಿಕೃತ ಅಲ್ಲ
BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ವರಿಷ್ಠರು ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ಕೇಳಿ ಬರುತ್ತಿರುವುದೆಲ್ಲವೂ ಊಹಾಪೋಹಗಳು, ಅಧಿಕೃತ ಅಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.