ಬೆಂಗಳೂರು, ಜನವರಿ 31: ಗಣರಾಜ್ಯೋತ್ಸವದ (Republic Day) ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ (LalBagh) 215ನೇ ಫಲಪುಷ್ಪ ಪ್ರದರ್ಶನ (Flower Show) ಆಯೋಜಿಸಲಾಗಿತ್ತು. ಈ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಡಾರ್ಜಲಿಂಗ್ನ ಇಪೇಶನ್ಸ್, ಪೆಟುನೀಯಾ, ಜೆರೇನಿಯಮ್, ಜೇರ್ಬೇರ, ಸೇವಂತಿಗೆ, ಕೆಲಾಂಚೋ, ಸಾಲ್ವಿಯಾ, ಗುಲಾಬಿ, ಸಂಪಿಗೆ, ಪ್ಯಾಲನೋಪ್ಸ್, ಲ್ಯಾಡ್ಸ್ ಸೇರಿದಂತೆ ಇಂಡೋ ಅಮೇರಿಕನ್ ಹೈಬ್ರಿಡ್ ಹೂವುಗಳು ನೋಡುಗರ ಕಣ್ಮನ ಸೆಳೆದಿದ್ದವು.
ಒಟ್ಟು 68 ಬಗೆಯ 32 ಲಕ್ಷ ಹೂಗಳನ್ನ ಬಳಸಲಾಗಿತ್ತು. 11 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳ ಸೌಂದರ್ಯಕ್ಕೆ ಜನರು ಮಾರು ಹೋಗಿದ್ದಾರೆ. ಇಷ್ಟು ಪ್ರಮಾಣದಲ್ಲಿ ಹೂಗಳನ್ನು ಬಳಸಲಾಗಿದ್ದು, ಫಲಪುಷ್ಪ ಪ್ರದರ್ಶನದ ನಂತರ ಈ ಹೂಗಳನ್ನು ಏನು ಮಾಡುತ್ತಾರೆ? ಎಂಬ ಪ್ರಶ್ನೆ ಉದ್ಭವಾಗಿದೆ. ಈ ಹೂವುಗಳನ್ನು ಬಣ್ಣದ ಸಾರ ಅಥವಾ ಎಸೆನ್ಸ್ಗಳ ತಯಾರಿಕೆಗೆ ಮತ್ತು ಅಗರಬತ್ತಿಗಳ ತಯಾರಿಗೆ ಬಳಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಪ್ರತಿವರ್ಷ ಹೂವುಗಳನ್ನು ನಮ್ಮ ಸಸ್ಯಗಳಿಗೆ ಗೊಬ್ಬರವಾಗಿ ಬಳಸುತ್ತಿದ್ದೇವು. ಆದರೆ ಈ ವರ್ಷ ಹೂಗಳನ್ನು ಮರುಬಳಕೆ ಮಾಡಲು ಯೋಜಿಸಿದ್ದೇವೆ. 30 ಲಕ್ಷ ಹೂವುಗಳಲ್ಲಿ ಸುಮಾರು 20 ಲಕ್ಷ ಹೂವುಗಳು (ಸುಮಾರು 1 ರಿಂದ 1.5 ಟನ್ ತೂಕ) ಮರುಬಳಕೆಗೆ ಲಭ್ಯವಿವೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಎಂ ಹೇಳಿದರು.
ಇದನ್ನೂ ಓದಿ: 5 ಲಕ್ಷ ಜನರಿಂದ ಲಾಲ್ಬಾಗ್ ಫ್ಲವರ್ ಶೋ ವೀಕ್ಷಣೆ, 2.59 ಕೋಟಿ ರೂ. ಆದಾಯ
ಐದು ವರ್ಷಗಳ ಹಿಂದೆ, ನಾವು ಬಣ್ಣದ ಸಾರ ತೆಗೆಯಲು ಹೂವುಗಳನ್ನು ನೀಡುತ್ತಿದ್ದೇವು. ಆದರೆ ನಂತರ ನಾವು ಸಸ್ಯಗಳಿಗೆ ಗೊಬ್ಬರವಾಗಿ ಬಳಸಲು ಆರಂಭಿಸಿದೇವು. ಈ ಬಾರಿ ಬಣ್ಣದ ಸಾರ ತೆಗೆಯಲು ಹಾಗೂ ಅಗರಬತ್ತಿ ತಯಾರಿಕೆಗೆ ಬಳಸಿಕೊಳ್ಳಲು ಕೆಲ ಸಂಸ್ಥೆಗಳು ಮುಂದಾಗಿವೆ. ಇನ್ನು ಇದಕ್ಕೂ ಮುನ್ನ ಹೂಗಳು ಒಣಗಬೇಕು. ಹೂವುಗಳು ಒಣಗಲು ಸುಮಾರು ಎರಡು ಮೂರು ದಿನಗಳು ಸಮಯ ತೆಗೆದುಕೊಳ್ಳುತ್ತದೆ. ಅವು ಸಂಪೂರ್ಣವಾಗಿ ಒಣಗಿದ ನಂತರ, ತಜ್ಞರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಸಮಾಜ ಸುಧಾರಕ, ದಾರ್ಶನಿಕ ಜಗದ್ಗುರು ಬಸವಣ್ಣ, ವಚನಕಾರರಾದ ಅಲ್ಲಮಪ್ರಭು, ಅಕ್ಕ ಮಹಾದೇವಿ, ಅಂಬಿಗರ ಚೌಡಯ್ಯ ಅವರ ಮೂರ್ತಿಗಳನ್ನು ಹೂವುಗಳಲ್ಲಿ ನಿರ್ಮಿಸಿದ್ದೇವು.
ಲಾಲ್ಬಾಗ್ ಫ್ಲವರ್ ಶೋಗೆ ರವಿವಾರ (ಜ.28) ರಂದು ತೆರೆ ಕಂಡಿದೆ. ಕಳೆದ 11 ದಿನಗಳಲ್ಲಿ ಒಟ್ಟು 5.6 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಒಟ್ಟು 2.59 ಕೋಟಿ ಆದಾಯ ಬಂದಿದೆ.ಕೊನೆಯ ದಿನವಾದ ರವಿವಾರ (ಜ.28) ರಂದು ಒಟ್ಟು 75,500 ಮಂದಿ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ 10 ರಿಂದ 11 ಲಕ್ಷದಷ್ಟು ಜನರು ಬರುವ ನಿರೀಕ್ಷೆ ಇತ್ತು.ಆದರೆ ತೋಟಾಗಾರಿಕೆಯ ನಿರೀಕ್ಷೆಗೆ ತಕ್ಕಂತೆ ಜನರು ಆಗಮಿಸಿಲ್ಲ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಫ್ಲವರ್ ಶೋಗೆ 10 ಲಕ್ಷದಷ್ಟು ಜನರು ಆಗಮಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ