ಬೆಂಗಳೂರು: ನಿವೃತ್ತ ಪೊಲೀಸ್ ಸಿಬ್ಬಂದಿ ಮುನಿಆಂಜಿನೇಯ(65) ಮೆಜೆಸ್ಟಿಕ್ನ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದೊಡ್ಡಬಳ್ಳಾಪುರದ ಮದುರನ ಹೊಸಹಳ್ಳಿ ನಿವಾಸಿ ಮುನಿಆಂಜಿನೇಯ, ಗೆಳೆಯರ ಜೊತೆ ಧರ್ಮಸ್ಥಳಕ್ಕೆ ಹೋಗಿ ಬರ್ತೀನಿ ಎಂದು ಮನೆಯಲ್ಲಿ ಹೇಳಿ ಹೊರಟಿದ್ದರು. ಆದ್ರೆ ಇಂದು ಮೆಜೆಸ್ಟಿಕ್ನಲ್ಲಿ ಶವ ಪತ್ತೆಯಾಗಿದೆ.
ದೇವರ ದರ್ಶನಕ್ಕೆಂದು ಹೋಗುವುದಾಗಿ ಹೇಳಿ ಹೊರಟ ಮುನಿಆಂಜಿನೇಯನವರು ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುನಿಆಂಜಿನೇಯ ನಿನ್ನೆ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ತೆರಳಿದ್ದರು. ಇಂದು ಬೆಳಗಿನ ಜಾವ 3 ಗಂಟೆಗೆ ಶವವಾಗಿ ಸಿಕ್ಕಿದ್ದಾರೆ. ಇನ್ನು ಬಸ್ ನಿಲ್ದಾಣದಲ್ಲಿ ಗೆಳೆಯರಿಗಾಗಿ ಕಾದು ಕುಳಿತಿದ್ದಾಗ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ನಿವೃತ್ತ ಪೊಲೀಸ್ ಸಿಬ್ಬಂದಿ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮುನಿಆಂಜಿನೇಯ ಬಳಿ ಇದ್ದ ನಗದು ಹಾಗೂ ಚಿನ್ನಾಭರಣ ನಾಪತ್ತೆಯಾಗಿದೆ. ಮುನಿಆಂಜಿನೇಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾ.24 ರಂದು ಎದುರಾಗಲಿದೆ ಬಸ್ ಸಮಸ್ಯೆ; ಅನಿರ್ದಿಷ್ಟಾವಧಿ ಧರಣಿಗೆ ಸಾರಿಗೆ ನೌಕರರ ನಿರ್ಧಾರ
ವಿಜಯನಗರ: ಪ್ರೀತಿಸಿದವಳು ಸಿಗಲಿಲ್ಲ ಎಂದು ಆಕೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ನಡೆದಿದೆ. ಆರೋಪಿ ಮೂಕಪ್ಪನವರ ಹನುಮಂತನ ಎಂಬಾತ ಪ್ರತಿಭಾಳನ್ನ ಪ್ರೀತಿಸುವುದಾಗಿ ಹೇಳಿಕೊಂಡು ಗ್ರಾಮದಲ್ಲಿ ಸುತ್ತುತ್ತಿದ್ದ. ಇದಾದ ಬಳಿಕ ಪ್ರತಿಭಾಳನ್ನ ರಾಣೆಬೆನ್ನೂರಿನ ನಾಗರಾಜ್ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಜೊತೆಗೆ ಆಕೆಗೆ ಓರ್ವ ಗಂಡು ಮಗು ಸಹ ಇದೆ.
ಮದುವೆಯಾದ ಬಳಿಕ ಚೆನ್ನಾಗಿ ಜೀವನ ನಡೆಸುತ್ತಿದ್ದ ಪ್ರತಿಭಾ ಚಿಕ್ಕಮ್ಮನ ಊರಿಗೆ ಜಾತ್ರೆಗೆ ಬಂದಿದ್ದಳು. ಇನ್ನೇನು ತನ್ನೂರಿಗೆ ಹೋಗಬೇಕು ಎನ್ನವಷ್ಟರಲ್ಲಿ ಪಾಗಲ್ ಪ್ರೇಮಿ ಹನುಮಂತ ಆಕೆಯನ್ನ ನಡು ರಸ್ತೆಯಲ್ಲಿ ಮನ ಬಂದಂತೆ ದೇಹದ ಬಹುತೇಕ ಭಾಗಳಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರಗಾಯಗೊಂಡಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗಮಧ್ಯಯೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೂಕಪ್ಪನವರ ಹನುಮಂತನನ್ನು ಬಂಧಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:05 am, Tue, 7 March 23