ಬೆಂಗಳೂರು, ಏ.21: ಪ್ರಧಾನಿ ಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ(BJP) ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ನೇತೃತ್ವದ ನಿಯೋಗ ದೂರು ನೀಡಿದೆ. ‘ಮೊಹಮ್ಮದ್ ನಲಪಾಡ್ ಹಾಗೂ ಸಿದ್ದಾಪುರ ಜಾನಿ ಪ್ರತಿಭಟನೆ ಮಾಡಿದ್ದಾರೆ. ಚೊಂಬು ಪ್ರದರ್ಶಿಸಿ ಪೊಲೀಸರಿದ್ದರೂ ಲೆಕ್ಕಿಸದೆ ನುಗ್ಗಿದ್ದಾರೆ. ಹೀಗಾಗಿ ನಿನ್ನೆ(ಏ.20) ಭದ್ರತೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇನ್ನು ಮೊಹಮ್ಮದ್ ನಲಪಾಡ್ ವಿರುದ್ಧ ಹಲವು ಪ್ರಕರಣಗಳಿವೆ. ಜೊತೆಗೆ ರೌಡಿಶೀಟರ್ ಸಿದ್ದಾಪುರ ಜಾನಿ ಕೂಡ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ಮೊಹಮ್ಮದ್ ನಲಪಾಡ್ ಸಾಥ್ ಕೊಟ್ಟಿದ್ದಾರೆ. ಈ ಹಿನ್ನಲೆ ಚುನಾವಣಾ ಪ್ರಚಾರದಿಂದ ನಲಪಾಡ್‌ರನ್ನು ದೂರ ಇರಿಸಬೇಕು, ಜೊತೆಗೆ ಸಿದ್ದಾಪುರ ಜಾನಿಯನ್ನ ರಾಜ್ಯದಿಂದ ಗಡಿಪಾರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ: ರಸ್ತೆಗಿಳಿದು ಚೊಂಬು ಪ್ರದರ್ಶಿಸಿದ ನಲಪಾಡ್
ಲೋಕಸಭಾ ಚುನಾವಣೆ ಹಿನ್ನಲೆ ನಿನ್ನೆ (ಏ.20) ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಅದರಂತೆ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿಯ HQTCಯಿಂದ ತೆರಳುತ್ತಿದ್ದ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಮೋದಿಯವರು ಅರಮನೆ ಮೈದಾನಕ್ಕೆ ತೆರಳುವಾಗ ರಸ್ತೆಗೆ ನುಗ್ಗಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ನಲಪಾಡ್, ಚೊಂಬು ಪ್ರದರ್ಶಿಸಿದ್ದರು. ಕೂಡಲೇ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ದೂರು ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Sun, 21 April 24