ಆಟೋ, ಕ್ಯಾಬ್​ ಬಳಕೆದಾರರಿಗೆ ಪ್ರತ್ಯೇಕ ಆ್ಯಪ್, ಬಿಡುಗಡೆ ಯಾವಾಗಾ ಗೊತ್ತಾ?

ಖಾಸಗಿ ಸಾರಿಗೆ ಒಕ್ಕೂಟಗಳು ಮಿತಿಮೀರಿದ ಕಮಿಷನ್ ಪಡೆಯುತ್ತಿರುವುದರಿಂದ ಆಟೋ, ಕ್ಯಾಬ್ ಚಾಲಕರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಆ್ಯಪ್ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ಆಟೋ, ಕ್ಯಾಬ್​ ಬಳಕೆದಾರರಿಗೆ ಪ್ರತ್ಯೇಕ ಆ್ಯಪ್, ಬಿಡುಗಡೆ ಯಾವಾಗಾ ಗೊತ್ತಾ?
ಶೀಘ್ರದಲ್ಲೇ ಆಟೋ, ಕ್ಯಾಬ್​ ಬಳಕೆದಾರರಿಗೆ ಪ್ರತ್ಯೇಕ ಆ್ಯಪ್
Updated By: Rakesh Nayak Manchi

Updated on: Aug 04, 2023 | 3:57 PM

ಬೆಂಗಳೂರು, ಆಗಸ್ಟ್ 4: ಪ್ರಯಾಣಿಕರು ಮತ್ತು ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರವು ಹೊಸ ಆ್ಯಪ್ ಸಿದ್ಧಪಡಿಸಲು ನಿರ್ಧರಿಸಿದೆ. ಈ ಆ್ಯಪ್ ನಾಲ್ಕೈದು ತಿಂಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಪ್ರತಿ ಕಿ.ಮೀ.ಗೆ ಇಂತಿಷ್ಟು ದರ ನಿಗದಿಗೂ ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ತಿಳಿಸಿದ್ದಾರೆ.

ಒಂದೊಮ್ಮೆ ಈ ಹೊಸ ಆ್ಯಪ್ ಗ್ರಾಹಕರಿಗೆ ಲಭ್ಯವಾದರೆ, ಖಾಸಗಿ ಸಾರಿಗೆ ಒಕ್ಕೂಟಗಳು ಹೆಚ್ಚುವರಿ ಹಣ ವಸೂಲಿ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಹೊಸ ಆ್ಯಪ್ ಜೊತೆಗೆ, ಬಿಎಂಆರ್‌ಸಿಎಲ್ ಜೊತೆ ಸೇರಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆಟೋ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಅವಧಿಯಲ್ಲಿ 25ನೇ ತಾರೀಕಿನವರೆಗೂ ವೇತನ ನೀಡಿರಲಿಲ್ಲ: ಬೊಮ್ಮಾಯಿಗೆ ರಾಮಲಿಂಗಾರೆಡ್ಡಿ ತಿರುಗೇಟು

ಸಾರಿಗೆ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಶಕ್ತಿ ಯೋಜನೆ ಜಾರಿ ನಂತರ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್​ ಮಾಲೀಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಈ ಯೋಜನೆ ಹಿಂಪಡೆಯುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜುಲೈ 27 ರಂದು ಬೆಂಗಳೂರು ಖಾಸಗಿ ಸಾರಿಗೆ ಒಕ್ಕೂಟಗಳು ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.

ಆಟೋ ಬಂದ್ ಘೋಷಣೆ ನಂತರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇತ್ತೀಚೆಗೆ ಸಾರಿಗೆ ಚಾಲಕರು ಮಾಲೀಕರೊಂದಿಗೆ ಸರಣಿ ಸಭೆ ನಡೆಸಿದ್ದರು. ಈ ವೇಳೆ ಆಟೋ, ಕ್ಯಾಬ್ ಚಾಲಕರು ಹಾಗೂ ಮಾಲೀಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಅಲ್ಲದೆ, ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಆಗಸ್ಟ್ 10 ರ ಗಡುವು ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Fri, 4 August 23