PSI ನೇಮಕಾತಿ ಅಕ್ರಮ ಪ್ರಕರಣ: ಮರು ಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್

ಕರ್ನಾಟಕದ ಭಾರೀ ಸದ್ದು ಮಾಡಿದ್ದ ಪಿಎಎಸ್​ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಮಹತ್ವದ ಅಭಿಪ್ರಾಯಪಟ್ಟಿದೆ.

PSI ನೇಮಕಾತಿ ಅಕ್ರಮ ಪ್ರಕರಣ: ಮರು ಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Aug 04, 2023 | 2:38 PM

ಬೆಂಗಳೂರು, (ಆಗಸ್ಟ್ 04): ಕರ್ನಾಟಕದ ಭಾರೀ ಸದ್ದು ಮಾಡಿದ್ದ545 ಪಿಎಎಸ್​ಐ ನೇಮಕಾತಿ ಅಕ್ರಮ(545 PSI Recruitment Scam)  ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸಬೇಕೋ ಅಥವಾ ಆರೋಪಿಗಳನ್ನು ಕೈಬಿಟ್ಟು ಉಳಿದವರನ್ನು ಆಯ್ಕೆ ಮಾಡಬೇಕೋ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಇದರ ಮಧ್ಯೆ  ಕರ್ನಾಟಕ ಹೈಕೋರ್ಟ್ (Karnataka High Court)​ ಮಹತ್ವದ ಅಭಿಪ್ರಾಯಪಟ್ಟಿದೆ. ಆಯ್ಕೆ ಪಟ್ಟಿ ರದ್ದುಪಡಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಇಂದು (ಆಗಸ್ಟ್ 04) ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಮೇಲ್ನೋಟಕ್ಕೆ ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: 545 PSI Recruitment Scam: ಆರೋಪಿಯಲ್ಲದವರ ಆಯ್ಕೆ ಸಾಧ್ಯವೇ? 10 ದಿನಗಳಲ್ಲಿ ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಪಿಎಸ್​ಐ ನೇಮಕಾತಿ ಆಯ್ಕೆ ಪಟ್ಟಿ ರದ್ದುಪಡಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್.ದಿನೇಶ್ ಕುಮಾರ್, ನ್ಯಾ.ಟಿ.ಜಿ.ಶಿವಶಂಕರೇಗೌಡರಿದ್ದ ವಿಭಾಗೀಯ ಪೀಠ, ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಬಳಿಕ ಅರ್ಜಿದಾರರ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದರು. ಇದರಿಂದ ಕೋರ್ಟ್, ವಿಚಾರಣೆ ಆ.7ಕ್ಕೆ ಮುಂದೂಡಿದೆ.

545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣದಲ್ಲಿ ಆರೋಪಿಗಳಲ್ಲದವರನ್ನು ನೇಮಕ ಮಾಡಲು ಸಾಧ್ಯವೇ ಎಂದು ತಿಳಿಸುವಂತೆ 10 ದಿನಗಳ ಕಾಲಾವಕಾಶ ನೀಡಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸೆ.28, 2022ರಂದು ಮರುಪರೀಕ್ಷೆ ನಡೆಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.

545 ಪಿಎಸ್​ಐ ನೇಮಕಾತಿ ಹಗರಣದ ಹಿನ್ನೆಲೆ

545 ಪಿಎಸ್​ಐ ಹುದ್ದೆಗಳ ಭರ್ತಿಗಾಗಿ ಕಳೆದ ವರ್ಷದ ಅಕ್ಟೋಬರ್ 3 ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಹಣ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತು. 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್​ಗಳಿಗೂ ಹಣದ ಹೊಳೆ ಹರಿದಿತ್ತು. ಬ್ರೋಕರ್​ಗಳ ಹಂತದಲ್ಲಿಯೂ ಕನಿಷ್ಠ 10 ಲಕ್ಷ, ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು ಎಂಬ ಅಂಶ ತಿಳಿದುಬಂದಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ