Shakti Scheme: ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದ ಸಾರಿಗೆ ನಿಗಮಗಳ ಸರಾಸರಿ ಆದಾಯದಲ್ಲಿ ಹೆಚ್ಚಳ
ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಹತ್ವದ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಸರಾಸರಿ ಆದಾಯವು ಶೇ.18.01ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದ ನಂತರ ನಾಲ್ಕು ಸಾರಿಗೆ ನಿಗಮಗಳ ಸರಾಸರಿ ಆದಾಯದಲ್ಲಿ ಶೇ.18.01ಕ್ಕೆ ಏರಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, ಶಕ್ತಿ ಯೋಜನೆ ಜಾರಿಯಾದ 20 ದಿನಗಳಲ್ಲಿ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)ಗಳ ಆದಾಯದಲ್ಲಿ ಗಮನಾರ್ಹ ಏರಿಕೆಯಾಗಿದೆ ಎಂದು ಸುದ್ದಿಸಂಸ್ಥೆ ನ್ಯೂಸ್ 9 ವಿಶ್ಲೇಷಿಸಿದೆ.
ಯೋಜನೆ ಜಾರಿಯಾದ ನಂತರ ಕೆಎಸ್ಆರ್ಟಿಸಿಯ ಸರಾಸರಿ ದೈನಂದಿನ ಆದಾಯವು 9.95 ಕೋಟಿ ರೂ.ಗಳಿಂದ 11.51 ಕೋಟಿ ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಬಿಎಂಟಿಸಿ ಆದಾಯವು 4.72 ಕೋಟಿ ರೂ.ನಿಂದ 5.18 ಕೋಟಿ ರೂ.ಗೆ ಏರಿಕೆಯಾದರೆ, NWKRTC ಆದಾಯವು 4.90 ಕೋಟಿಯಿಂದ 6.43 ಕೋಟಿಗೆ ಮತ್ತು KKRTC ಆದಾಯ 4.91 ಕೋಟಿ ರೂ.ನಿಂದ 5.77 ಕೋಟಿ ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: ಸಾರಿಗೆ ನಿಗಮಗಳಿಗೆ “ಶಕ್ತಿ” ತಂದ ಉಚಿತ ಪ್ರಯಾಣ ಯೋಜನೆ; ಆಟೋ, ಓಲಾ, ಊಬರ್ಗೆ ಸಂಕಷ್ಟ
ನಾಲ್ಕು ವಿಭಾಗಗಳ ಪೈಕಿ ಎನ್ಡಬ್ಲ್ಯುಕೆಆರ್ಟಿಸಿ ವಿಭಾಗದ ಸರಾಸರಿ ಆದಾಯವು ಅತ್ಯಧಿಕ (ಶೇ 31.22) ಹೆಚ್ಚಳವಾಗಿದ್ದು, ನಂತರ ಕೆಕೆಆರ್‌ಟಿಸಿ ಶೇ.17.51, ಕೆಎಸ್‌ಆರ್‌ಟಿಸಿ ಶೇ.15.68 ಮತ್ತು ಬಿಎಂಟಿಸಿ ಶೇ 9.74ರಷ್ಟು ಆದಾಯ ಗಳಿಸಿದೆ. ಮಹಿಳಾ ಪ್ರಯಾಣಿಕರನ್ನು ಹೊರತುಪಡಿಸಿದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಮತ್ತು ಕೆಕೆಆರ್ಟಿಸಿಗೆ ಸರಾಸರಿ ದೈನಂದಿನ ಆದಾಯವು ಕ್ರಮವಾಗಿ 7.01 ಕೋಟಿ, 3.08 ಕೋಟಿ, 3.31 ಕೋಟಿ ಮತ್ತು 3.47 ಕೋಟಿ ರೂ. ಆಗಿದೆ.
ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
ಜೂನ್ 11 ರಿಂದ ನಾಲ್ಕು ನಿಗಮಗಳಲ್ಲಿ ಪ್ರಯಾಣಿಸುವ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆಯಲ್ಲಿ 28.39 ಶೇಕಡಾ ಏರಿಕೆಯಾಗಿದೆ ಎಂದು ದತ್ತಾಂಶಗಳು ತಿಳಿಸಿವೆ. ಕೆಕೆಆರ್ಟಿಸಿಯಲ್ಲಿ 34.72 ರಷ್ಟು, ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲಿ ಶೇ.33.75, ಕೆಎಸ್‌ಆರ್‌ಟಿಸಿಯಲ್ಲಿ ಶೇ.30.14 ಮತ್ತು ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ.21.75 ರಷ್ಟು ಹೆಚ್ಚಾಗಿದೆ.
ಶಕ್ತಿ ಯೋಜನೆ ಜಾರಿ ನಂತರ ಮಹಿಳೆಯರು ಅತಿಹೆಚ್ಚು ಓಡಾಡುವ ನಿಗಮ ಎನ್‌ಡಬ್ಲ್ಯೂಕೆಆರ್‌ಟಿಸಿ ಆಗಿದೆ. ನಂತರದ ಸ್ಥಾನದಲ್ಲಿ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ಇದೆ. ಈವರೆಗೆ ನಾಲ್ಕು ನಿಗಮಗಳಲ್ಲಿ 9,95,91,260 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, 234,49,65,394 ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ