ಬೆಂಗಳೂರು: ಬೆಂಗಳೂರಿನಲ್ಲಿ ವಾಸವಿದ್ದ ಬಿಹಾರ (Bihar) ಮೂಲದ ಎಲೆಕ್ಟ್ರಿಷಿಯನ್ ಒಬ್ಬ ತನ್ನ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಕಾರಣದಿಂದ ಕೋಪಗೊಂಡು, ಆಕೆಯನ್ನು ಕೊಂದು (Murder) ಆ ಶವವನ್ನು ಶಿರಾಡಿ ಘಾಟ್‌ನಲ್ಲಿ ಎಸೆದಿದ್ದಾನೆ. ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಏನೇನೋ ಕತೆ ಕಟ್ಟಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಸತ್ಯಾಂಶ ಗೊತ್ತಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆರೋಪಿಯನ್ನು ಪೃಥ್ವಿ ರಾಜ್ ಸಿಂಗ್ ಎಂದು ಗುರುತಿಸಲಾಗಿದ್ದು, 9 ತಿಂಗಳ ಹಿಂದಷ್ಟೇ ಜ್ಯೋತಿ ಕುಮಾರಿ ಎಂಬ ಯುವತಿಯನ್ನು ಮದುವೆಯಾಗಿದ್ದ. ಮದುವೆಯ ಸಮಯದಲ್ಲಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದರಿಂದ ಅವನು ತನ್ನ ಹೆಂಡತಿಯ ಮೇಲೆ ಕೋಪಗೊಂಡಿದ್ದ. ಅವಳು ಅವನನ್ನು ಸಂಸ್ಕೃತಿಯಿಲ್ಲದವನು ಎಂದು ಟೀಕಿಸುತ್ತಿದ್ದಳು. ಅಲ್ಲದೆ, ಆತನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಆಕೆ ಒಪ್ಪಿರಲಿಲ್ಲ. ಇದರಿಂದ ಆತ ಕೋಪಗೊಂಡಿದ್ದ.
ಮದುವೆಯ ಸಮಯದಲ್ಲಿ ಅವಳು ತನಗೆ 28 ವರ್ಷ ಎಂದು ನಮ್ಮ ಮನೆಯವರಿಗೆ ತಿಳಿಸಿದ್ದಳು. ಆದರೆ, ಮದುವೆಯ ನಂತರ ಅವಳಿಗೆ 38 ವರ್ಷವೆಂಬುದು ಗೊತ್ತಾಗಿತ್ತು. ಅವಳು ನನಗಿಂತ 10 ವರ್ಷ ದೊಡ್ಡವಳು ಎಂದು ಗೊತ್ತಾದ ಮೇಲೆ ಜಗಳ ಹೆಚ್ಚಾಗಿತ್ತು. ಅವಳು ಮದುವೆಯಾದಾಗಿನಿಂದ ಇಲ್ಲಿಯವರೆಗೂ ಲೈಂಗಿಕ ಕ್ರಿಯೆ ನಡೆಸಲು ಒಪ್ಪಿರಲಿಲ್ಲ. ಯಾವಾಗಲೂ ನನ್ನನ್ನು ಮತ್ತು ನನ್ನ ಹೆತ್ತವರನ್ನು ಅವಮಾನಿಸುತ್ತಿದ್ದಳು ಎಂದು ಪೃಥ್ವಿ ರಾಜ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯಿಂದಲೇ ಪತ್ನಿಯ ಕೊಲೆ
ಕೋಪಗೊಂಡ ಪೃಥ್ವಿ ರಾಜ್ ಸಿಂಗ್, ಜ್ಯೋತಿಯನ್ನು ಮನೆಯಿಂದ ಹೊರಹಾಕಲು ನಿರ್ಧರಿಸಿದನು. ಆದರೆ, ಆಕೆ ಅದಕ್ಕೆ ಒಪ್ಪದಿದ್ದಾಗ ಅವನು ತನ್ನ ಹೆಂಡತಿಯನ್ನು ಕೊಲ್ಲಲು ಬಿಹಾರದ ತನ್ನ ಸ್ನೇಹಿತ ಸಮೀರ್ ಕುಮಾರ್ ಸಹಾಯ ಪಡೆದನು. ಆಗಸ್ಟ್ 3ರಂದು ಬೇರೆ ಊರಿಗೆ ಜ್ಯೋತಿಯನ್ನು ಕರೆದುಕೊಂಡು ಹೋಗಿ, ಅಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಂದು, ನಂತರ ಶವವನ್ನು ಎಸೆದರು. ಮರುದಿನ ಪೊಲೀಸರಿಗೆ ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದರು.
ನನ್ನ ಹೆಂಡತಿ ಜ್ಯೋತಿ ಆಗಾಗ ಮನೆಯಿಂದ ಹೊರಹೋಗುತ್ತಿದ್ದಳು. ಒಂದೆರಡು ದಿನಗಳಾದ ನಂತರ ತಾನಾಗಿಯೇ ಹಿಂತಿರುಗುತ್ತಿದ್ದಳು. ಆದರೆ, ಈ ಬಾರಿ 2 ದಿನಗಳಾದರೂ ಮನೆಗೆ ಬಂದಿಲ್ಲ ಎಂದು ಆತ ದೂರು ನೀಡಿದ್ದ. ಆ ವೇಳೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆದರೂ ತನಿಖೆಯ ಸಮಯದಲ್ಲಿ ಪೊಲೀಸರಿಗೆ ಪೃಥ್ವಿ ರಾಜ್ ಸಿಂಗ್ ಬಗ್ಗೆ ಅನುಮಾನ ಮೂಡಿತ್ತು. ಹೀಗಾಗಿ, ಪೊಲೀಸರು ಆತನನ್ನು ಬಂಧಿಸಿದ್ದರು.
ಆತನ ವಿಚಾರಣೆ ನಡೆಸುವಾಗ ಆತ ತಪ್ಪೊಪ್ಪಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ.