ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯಿಂದಲೇ ಪತ್ನಿಯ ಕೊಲೆ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನೇ ಪತಿ ಕೊಡಲಿಯಿಂದ ಬರ್ಬರವಾಗಿ ಕೊಲೆಮಾಡಿರುವ ಘಟನೆ ಲಿಂಗಸುಗೂರು ತಾಲೂಕಿನ ಗುಡದಾಳದಲ್ಲಿ ನಡೆದಿದೆ.

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯಿಂದಲೇ ಪತ್ನಿಯ ಕೊಲೆ
ಸಾಂಧರ್ಬಿಕ ಚಿತ್ರ
TV9kannada Web Team

| Edited By: Vivek Biradar

Aug 17, 2022 | 2:45 PM

ರಾಯಚೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನೇ ಪತಿ ಕೊಡಲಿಯಿಂದ ಬರ್ಬರವಾಗಿ ಕೊಲೆಮಾಡಿರುವ ಘಟನೆ ಲಿಂಗಸುಗೂರು ತಾಲೂಕಿನ ಗುಡದಾಳದಲ್ಲಿ ನಡೆದಿದೆ. ರೇಣುಕಾ(26) ಕೊಲೆಯಾದ ಮಹಿಳೆ. ಆರೋಪಿ ಜೆಟ್ಟೆಪ್ಪ ಪತ್ನಿಯನ್ನು ಕೊಲೆಗೈದು ಮಕ್ಕಳ ಸಮೇತ ಪೊಲೀಸರಿಗೆ ಶರಣಾಗಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ರೇಣುಕಾ ಸ್ವಗ್ರಾಮದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿತ್ತು. ಈ ಆಗಾಗ ಪತಿ-ಪತ್ನಿ ನಡುವೆ ಕಲಹ ಉಂಟಾಗುತ್ತಿತ್ತು. ಇಂದು ಬೆಳಗ್ಗೆ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೆ ಏರಿ ಪತಿ ಜೆಟ್ಟೆಪ್ಪ ಪತ್ನಿಯನ್ನು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಪತಿಯಿಂದ ಪತ್ನಿಯ ಕೊಲೆ; ನಾಪತ್ತೆ ಎಂದು ಪ್ರಕರಣ ದಾಖಲಿಸಿದ್ದ ಆರೋಪಿ ಪತಿ: ಡಿಸಿಪಿ ಸಿಕೆ ಬಾಬಾ

ಬೆಂಗಳೂರು: ಪತಿಯಿಂದ ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಮಾತನಾಡಿ ಆಗಸ್ಟ್ 5 ರಂದು ಮಡಿವಾಳ ಠಾಣೆಗೆ ಒಬ್ಬ ವ್ಯಕ್ತಿ ದೂರು ನೀಡುತ್ತಾನೆ. ಹೆಂಡತಿ ಮನೆಯಿಂದ ಕಾಣೆಯಾದ ಬಗ್ಗೆ ದೂರು ನೀಡುತ್ತಾನೆ. ಆತನ ಹೇಳಿಕೆ ಮೇಲೆ ಅನುಮಾನ ಮೂಡತ್ತೆ. ತನಿಖೆ ವೇಳೆ ಮಹಿಳೆ ಕೊಲೆ ಆಗಿದೆ ಅನ್ನೋದು ಗೊತ್ತಾಗಿದೆ. ಪತಿಯೇ ಪತ್ನಿಯನ್ನ ಕೊಂದಿರೋದು ಗೊತ್ತಾಗಿದೆ ಎಂದು ಹೇಳಿದರು.

ಹಾಲಿ ಡೇ ಟ್ರಿಪ್ ಅಂತಾ ಕರೆದೊಯ್ದು ಮಲ್ಪೆಗೆ ಹೋಗಿ ನಂತರ ಶಿರಾಡಿ ಘಾಟ್ ಮೇಲೆ ಬರುವಾಗ ಕೊಲೆ ಮಾಡುತ್ತಾನೆ. ಕಾರಲ್ಲಿಯೇ ಪತಿ ಮತ್ತೊಬ್ಬ ಸ್ನೇಹಿತನ ಸಹಾಯದಿಂದ ವೇಲ್ ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡುತ್ತಾನೆ. ಕಾಣೆಯಾಗಿದ್ದ ಕೇಸ್ ಈಗ ಕೊಲೆ ಕೇಸ್ ಆಗಿ ಬದಲು ಮಾಡಿಕೊಂಡಿದ್ದೇವೆ ಎಂದರು.

ಜೂಮ್ ಕಾರ್ ನಲ್ಲಿ ಮೂವರು ಇಲ್ಲಿಂದ ಹೋಗಿದ್ದಾರೆ. ಆರೋಪಿ ಪೃಥ್ವಿರಾಜ್ ಎಲೆಕ್ಟ್ರಾನಿಕ್ ಅಂಗಡಿ ಇಟ್ಟುಕೊಂಡಿದ್ದಾನೆ. 13 ವರ್ಷದಿಂದ ಬೆಂಗಳೂರಲ್ಲಿ ವಾಸವಿದ್ದಾನೆ. ಪಿಜಿಗಳಿಗೆ ಎಲೆಕ್ಟ್ರಾನಿಕ್ ವಸ್ತು ಸಪ್ಲೆ ಮಾಡುತ್ತಿದ್ದನು. ಕಳೆದ ವರ್ಷ ನವಂಬರ್​ನಲ್ಲಿ ಮದುವೆಯಾಗಿದ್ದಾನೆ. ಮಹಿಳೆ ಹಾಗೂ ಆರೋಪಿ ಇಬ್ಬರ ಮಧ್ಯೆ ವಯಸ್ಸಿನ ಅಂತರ ಕೂಡ ಇದೆ. ಮಹಿಳೆ ಬಿಕಾಂ ಓದಿದ್ದು, ಯುಪಿಎಸ್​ಸಿ ಪರೀಕ್ಷೆ ಕೂಡ ಬರೆದಿದ್ದಳು ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಉತ್ತರ ವಿಭಾಗದ ಪೋಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ವಿಭಾಗದ ವಿವಿಧ ಠಾಣೆಗಳ 89 ಪ್ರಕರಣಗಳನ್ನ ಪತ್ತೆ ಮಾಡಿ 61 ಜನರನ್ನು ಬಂಧಸಿದ್ದಾರೆ. ರಕ್ತ ಚಂದನ, ವಾಹನ ಕಳವು, ಮಾದಕವಸ್ತು, ಸುಲಿಗೆ, ಸರಗಳ್ಳತನ ಸೇರಿದಂತೆ ಇತರೆ ಪ್ರಕರಣಗಳಲ್ಲಿ 2 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

57 ಲಕ್ಷ ಮೌಲ್ಯದ 1.9 ಕೆಜಿ ಚರಸ್, 33 ಲಕ್ಷದ 662 ಗ್ರಾಂ MDMA, 5.40 ಲಕ್ಷದ ಗಾಂಜಾ, 35 ಲಕ್ಷದ 722 ಕೆಜಿ ರಕ್ತ ಚಂದನ, 31 ಲಕ್ಷದ ಚಿನ್ನಾಭರಣ, 2.5 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು, 24 ಲಕ್ಷ ಮೌಲ್ಯದ 51 ದ್ವಿಚಕ್ರ ವಾಹನಗಳು, 7 ತ್ರಿ ಚಕ್ರ ವಾಹನಗಳು, 3.4 ಲಕ್ಷ ನಗದು, 7 ಮೊಬೈಲ್ ಹಾಗೂ 1 ನಾಡ ಪಿಸ್ತೂಲ್ 2 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಜಿಂಕೆ ಕೊಂಬು ಹಾಗೂ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ವಾಹನ ವಶಕ್ಕೆ

ಉತ್ತರ ಕನ್ನಡ: ಜಿಂಕೆ ಕೊಂಬು ಹಾಗೂ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಾಹನ ಚಾಲಕನನ್ನು ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಶಿರಸಿಯಿಂದ ಗೋವಾಕ್ಕೆ ನಾಲ್ಕು ಜಿಂಕೆ ಕೊಂಬು ಹಾಗೂ ಕಟ್ಟಿಗೆ ಸಾಗಾಟ ಮಾಡುತ್ತಿದ್ದಾಗ ಕುಮಟಾ ತಾಲೂಕಿನ ಕತ್ತಗಾಲ ಚೆಕ್ ಪೊಸ್ಟ್ ಬಳಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ. ಕತ್ತಗಾಲ ಅರಣ್ಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜೊಂದರ ಅಧ್ಯಕ್ಷ, ಪ್ರಾಚಾರ್ಯನ ಮೇಲೆ ಲೈಂಗಿಕ ಕಿರುಕುಳದ ಆರೋಪ

ಧಾರವಾಡ: ವಿಶ್ವೇಶ್ವರಯ್ಯ ‌ಪಿಯು ವಿಜ್ಞಾನ ಕಾಲೇಜಿನ ಅಧ್ಯಕ್ಷ ಮತ್ತು ಪ್ರಾಚಾರ್ಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಧಾರವಾಡದ ಜಯನಗರ ಬಡಾವಣೆಯ ವಿಶ್ವೇಶ್ವರಯ್ಯ ‌ಪಿಯು ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ್ ಯಡವಣ್ಣವರ್, ಪ್ರಾಚಾರ್ಯ ಮಹದೇವ ಕಿರುವತ್ತಿಗೌಡರ್ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವಸ್ಥಾನ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮೈ ಮುಟ್ಟುತ್ತಾರೆಂಬ ಆರೋಪ ಕೇಳಿಬಂದಿದೆ. 10 ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರ ಹಾಸ್ಟೇಲ್‌ಗೆ ಮಧ್ಯರಾತ್ರಿ ಹೋಗಿ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ಕಳೆದ ನಾಲ್ಕು ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆ. ಇಬ್ಬರ ವಿರುದ್ಧ ವಿದ್ಯಾರ್ಥಿನಿಯರು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕುಖ್ಯಾತ ಅಂತರಾಜ್ಯ ರಾಬರಿಕೋರನ ಬಂಧನ

ನೆಲಮಂಗಲ: ಮನೆಗೆ ನುಗ್ಗಿ ಮಹಿಳೆಯ ಕೈ-ಕಾಲು ಕಟ್ಟಿ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನಾಭರಣ ರಾಬರಿ ಮಾಡಿದ್ದ ಕುಖ್ಯಾತ ಅಂತರಾಜ್ಯ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸತೀಶ್(28)ಬಂಧಿತ ಅರೋಪಿ. ಆನ್​ಲೈನ್ ರಮ್ಮಿ, ಪಬ್‌ಜೀ ಆಡುವ ಸಲುವಾಗಿ ಅರೋಪಿ ರಾಬರಿ ಮಾಡಿದ್ದನು. ಆರೋಪಿಯಿಂದ 6ಲಕ್ಷ ರೂ ಬೆಲೆ ಬಾಳುವ 140 ಗ್ರಾಂ ತೂಕದ ಚಿನ್ನಾಭರಣ, ಐ-ಫೋನ್,1ಲಕ್ಷ ರೂ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅರೋಪಿ ಜುಲೈ8 ರಂದು 47ವರ್ಷದ ಮಹಿಳೆ ರಿಹಾನ ಒಬ್ಬರೇ ಮನೆಯಲ್ಲಿದ್ದಾಗ ಕೈ-ಕಾಲು ಕಟ್ಟಿ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನಾಭರಣ ರಾಬರಿ ಮಾಡಿದ್ದನು.

ಗಾರೆ ಕೆಲಸ ಮಾಡಿಕೊಂಡಿದ್ದ ಅರೋಪಿ ಸತೀಶ್ ಆನ್​ಲೈನ್ ರಮ್ಮಿ, ಪಬ್‌ಜೀ ಆಡುವ ಸಲುವಾಗಿ ಕೃತ್ಯ ಎಸಗಿದ್ದೇನೆ ಎಂದು ಪೊಲೀಸರ ತನಿಖೆ ವೇಳೆ ಹೇಳಿಕೆ ನೀಡಿದ್ದಾನೆ. ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada