ಬೆಂಗಳೂರು: ನಗರದಲ್ಲಿ ನಿನ್ನೆ ವರುಣನ ಅಬ್ಬರ ಜೋರಾಗಿತ್ತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ಹೊತ್ತಿಗೆ ವರುಣ ಅಬ್ಬರಿಸೋಕೆ ಶುರು ಮಾಡಿದ್ದ. ಇನ್ನು ರಾತ್ರಿಯಂತೋ ಮಳೆಗೆ ನಗರದ ಬಹುತೇಕ ರಸ್ತೆಗಳು ಕರೆಯಂತಾಗಿದ್ದವು. ಸದ್ಯ ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡ್ತಿಲ್ಲ. ಹೀಗಾಗಿ ನಗರದಲ್ಲಿ ಮಳೆ ಬಂದರೆ ಸಮಸ್ಯೆಯಾಗುತ್ತಿದೆ ಎಂದು ಬಿಬಿಎಂಪಿ ಮೇಲೆ ಗರಂ ಆಗಿದ್ದಾರೆ.
ನನ್ನ ಅವಧಿಯಲ್ಲೇ ಒತ್ತುವರಿ ತೆರವು ಮಾಡಲು ಹೇಳಿದ್ದೆ. ತಕ್ಷಣವೇ ಒತ್ತುವರಿ ತೆರವು ಮಾಡುವಂತೆ ಸೂಚನೆ ಕೊಟ್ಟಿದ್ದೆ. ಆದರೆ ಒತ್ತುವರಿ ತೆರವು ಮಾಡದ ಹಿನ್ನೆಲೆ ಸಮಸ್ಯೆಯಾಗ್ತಿದೆ ಎಂದರು.
ಇನ್ನು ಮತ್ತೊಂದೆಡೆ ಉತ್ತರಪ್ರದೇಶದ ಲಖೀಮ್‌ಪುರ್ ಖೇರಿಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ ಹೋಗುತ್ತಿದ್ದರೆ ತಡೆ ಹಿಡಿಯಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ವಿಪಕ್ಷ ನಾಯಕರನ್ನು ಹೀಗೆ ತಡೆಯುವುದು ಖಂಡನೀಯ. ಉತ್ತರ ಪ್ರದೇಶ ಸರ್ಕಾರದಿಂದ ಉದ್ಧಟತನದ ಪರಮಾವಧಿ. ಯಾವುದೇ ಸರ್ಕಾರ ಸಂವಿಧಾನದಂತೆ ಕೆಲಸ ಮಾಡಬೇಕು ಎಂದು ಗರಂ ಆಗಿದ್ದಾರೆ.
ಲಖೀಮ್‌ಪುರ್ ಖೇರಿಯಲ್ಲಿ ಹಿಂಸಾಚಾರ ಖಂಡಿಸಿ ಇಂದು ಸಂಜೆ 6 ಗಂಟೆಗೆ ಕಾಂಗ್ರೆಸ್‌ನಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಮಾಡ್ತೇವೆ. ಪ್ರಿಯಾಂಕಾ ಗಾಂಧಿಯನ್ನು ಬಿಡುಗಡೆ ಮಾಡಬೇಕು. ಘಟನಾ ಸ್ಥಳಕ್ಕೆ ಹೋಗಲು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಕೇಂದ್ರ ಸಚಿವರ ಪುತ್ರ ರೈತರ ಮೇಲೆ ವಾಹನವನ್ನು ನುಗ್ಗಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ನುಗ್ಗಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ, ಕೆಲವರು ಮೃತಪಟ್ಟಿದ್ದಾರೆ. ಹೋಂ ಮಿನಿಸ್ಟರ್ ಮಗ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಮಂತ್ರಿಯ ಮಗನನ್ನು ಕೂಡಲೇ ಬಂಧಿಸಬೇಕು. ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.