ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕರ ಬಗ್ಗೆ ಸಹಾನುಭೂತಿ ಹೊಂದಿರುವವರೊಂದಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಖ್ಯ ಹೊಂದಿದ್ದಾರೆ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಗಂಭೀರ ಆರೋಪ ಮಾಡಿದರು. ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಹತ್ಯೆ ಮಾಡಿದವರನ್ನು ಬಿಡುಗಡೆ ಮಾಡುವಂತೆ ಹೋರಾಟ ಮಾಡಿದ್ದ ವಿಸಿಕೆ ಪಕ್ಷವು ಎಲ್ಟಿಟಿಇ ಮುಖಂಡ ಪ್ರಭಾಕರನ್ ಹುಟ್ಟುಹಬ್ಬ ಆಚರಣೆಯನ್ನು ತನ್ನ ಪ್ರಣಾಳಿಕೆ ಮಾಡಿಕೊಂಡಿತ್ತು. ಅಂಥ ಪಕ್ಷ ಕೊಟ್ಟ ಪ್ರಶಸ್ತಿಯನ್ನು ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕಕ್ಕೆ ಬರುತ್ತಿರುವ ರಾಹುಲ್ ಗಾಂಧಿಗೆ ನಮ್ಮದೊಂದು ಪ್ರಶ್ನೆ ಇದೆ. ನಿಮ್ಮ ತಂದೆಯನ್ನು ಹತ್ಯೆ ಮಾಡಿದ ವಿಸಿಕೆ ಪಕ್ಷದಿಂದ ಪ್ರಶಸ್ತಿ ಪಡೆದ ಸಿದ್ದರಾಮಯ್ಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಲ್ಟಿಟಿಇ ಬೆಂಬಲಿಸುವ ವಿಸಿಕೆ ಪಕ್ಷವನ್ನು ಬೆಂಬಲಿಸುವ ಸಿದ್ದರಾಮಯ್ಯ ನಡೆಯು ಗಾಂಧಿ ಕುಟುಂಬಕ್ಕೆ ಅವಮಾನ ಮಾಡಿದಂತೆ ಅಲ್ಲವೇ? ಸಿದ್ದರಾಮಯ್ಯ ಅವರಿಗೆ ಯಾವ ಸಿದ್ದಾಂತವು ಇಲ್ಲ. ಅವರು ಅಧಿಕಾರಕ್ಕೆ ಏನು ಬೇಕಾದರೂ ಮಾಡುತ್ತಾರೆ. ಸಮಾಜವಾದಿ ಸಿದ್ದರಾಮಯ್ಯ ಹ್ಯೂಬ್ಲೋಟ್ ವಾಚ್ ಕಟ್ಟುತ್ತಾರೆ. ಲೋಹಿಯಾ ಎಂದು ಹೇಳಿಕೊಳ್ಳುವ ಇವರು ಅರ್ಕಾವತಿ ಬಡಾವಣೆ ಮಾಡಲು ಡಿ ನೋಟಿಫಿಕೇಷನ್ ಮಾಡಿ ರೀಡೂ ಮಾಡುತ್ತಾರೆ ಎಂದು ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಂದು ನಿಯಮ ಇದೆ. ಚುನಾವಣೆ ನಡೆಯುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನು ಪಕ್ಷವು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಮಾಡುವುದು ವಾಡಿಕೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಇದೇ ಕಾರಣಕ್ಕೆ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ತಮಗೆ ಪ್ರತಿಸ್ಪರ್ಧಿಯಾಗಬಾರದು ಎಂದು ಮಲ್ಲಿಕಾರ್ಜನ ಖರ್ಗೆ ಅವರನ್ನು ಸೋಲಿಸಿದ್ದರು. ಈಗ ಡಿ.ಕೆ.ಶಿವಕುಮಾರ್ಗೆ ಖೆಡ್ಡ ತೋಡಲೆಂದೇ ಸಿದ್ಧರಾಮೋತ್ಸವ ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷವಯ ಇಂದು ದಾರುಣ ಪರಿಸ್ಥಿತಿ ತಲುಪಿದೆ. ಸಿದ್ದರಾಮಯ್ಯ ಪರ ವ್ಯಕ್ತಿಪೂಜೆ ಆಗುತ್ತಿರುವುದನ್ನು ನೋಡಿಯೂ ಉಳಿದವರು ಕಣ್ಮುಚ್ಚಿ ಕುಳಿತಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮವು ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮಗ್ಗುಲ ಮುಳ್ಳಾಗಲಿದೆ. ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ಪಕ್ಷವು ಸಂಪೂರ್ಣ ಸರ್ವನಾಶವಾಗಲಿದೆ ಎಂದು ಹೇಳಿದರು.
ಮತ್ತೋರ್ವ ಮುಖಂಡ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈಗ ಸಿದ್ದರಾಮಯ್ಯಗೆ ಕಾಂಗ್ರೆಸ್ ಸಣ್ಣದಾಗಿ ಕಾಣುತ್ತಿದೆ. ಕಾಂಗ್ರೆಸ್ಗೆ ಸಿದ್ದರಾಮಯ್ಯ ದೊಡ್ಡವರಂತೆ ಕಾಣಿಸುತ್ತಿದ್ದಾರೆ. ಈ ಹಿಂದೆ ಶರದ್ ಪವಾರ್, ಮಮತಾ ಬ್ಯಾನರ್ಜಿ ಎಲ್ಲರೂ ಸ್ವಂತಿಕ ಉಪಯೋಗಿಸಿದ್ದರಿಂದ ಪಕ್ಷ ತೊರೆಯಬೇಕಾಯಿತು. ಈ ಸಿದ್ದರಾಮಯ್ಯ ಸ್ವಂತಿಕೆ ಬಳಸುತ್ತಿದ್ದಾರೆ. ಅವರ ಪರಿಸ್ಥಿತಿ ಏನಾಗುತ್ತದೋ ಗೊತ್ತಿಲ್ಲ ಎಂದರು.
Published On - 12:08 pm, Tue, 2 August 22