Bangalore Rain: ಹಲವು ಪ್ರದೇಶಗಳು ಜಲಾವೃತ; ಸಿಎಂ ಭೇಟಿ ಕೊಟ್ಟು ಎರಡು ತಿಂಗಳಾದರೂ ಬಗೆಹರಿಯದ ಮಳೆ ನೀರಿನ ಸಮಸ್ಯೆ
Bangalore News: ಬೆಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳು ಜಲಾವೃಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ ರಸ್ತೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಬೆಂಗಳೂರು: ನಗರದ ಹಲವೆಡೆ ಸೋಮವಾರ ರಾತ್ರಿ ಭಾರೀ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ಪೈಕಿ ಎರಡು ತಿಂಗಳ ಹಿಂದೆಯಷ್ಟೆ ಸಂಪೂರ್ಣ ಜಲಾವೃತವಾಗಿದ್ದ ಸಾಯಿ ಲೇಔಟ್ ಕೂಡ ಒಂದು. ಇಲ್ಲಿನ ಜನರ ಬೇಸರದ ಸಂಗತಿ ಏನೆಂದರೆ, ಈ ಪ್ರದೇಶಕ್ಕೆ ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಕೊಟ್ಟು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಸಮಸ್ಯೆಯನ್ನು ನಿರ್ಲಕ್ಷಿಸಿ, ನೀಡಿದ ಭರವಸೆಯನ್ನು ಭರವಸೆಯಾಗಿಯೇ ಉಳಿಸಿದ ಪರಿಣಾಮ ನಿನ್ನೆ ಮತ್ತೆ ಸಾಯಿ ಲೇಔಟ್ ಜಲಾವೃತಗೊಂಡಿದೆ.
ಸೋಮವಾರ ಸುರಿದ ಭಾರೀ ಮಳೆಗೆ ಸಾಯಿ ಲೇಔಟ್ ಜಲಾವೃತಗೊಂಡಿದೆ. ರಾತ್ರಿ ಇಡೀ ಸುರಿದ ಮಳೆಯ ಪರಿಣಾಮ ಸಾಯಿ ಲೇಔಟ್ ಮಳೆ ನೀರಿನಿಂದ ಆವೃತವಾಗಿದೆ. ಅಲ್ಲದೆ ನಿರಂತರ ಮಳೆಯಾಗುತ್ತಿರುವುದರಿಂದ ಮನೆಯೊಳಗೆ ಪದೇಪದೇ ನೀರು ನುಗ್ಗುತ್ತಿದ್ದು, ಬೇಸತ್ತ ಹಲವರು ತಮ್ಮ ಮನೆಯನ್ನು ಖಾಲಿ ಮಾಡಿ ಹೋಗಿದ್ದಾರೆ. ಸಾಯಿ ಬಡಾವಣೆಯ ಎರಡನೇ ಕ್ರಾಸ್ನ ಬಹುತೇಕ ನೆಲಮಹಡಿ ಮನೆಗಳು ಖಾಲಿಯಾಗಿವೆ.
ಬಿಬಿಎಂಪಿ ವಿರುದ್ಧ ಸಾಯಿ ಲೇಔಟ್ ನಿವಾಸಿಗಳ ಆಕ್ರೋಶ
ಹೊರಮಾವಿನ ಸಾಯಿ ಲೇಔಟ್ ಮತ್ತೆ ಜಲಾವೃತಗೊಂಡ ಹಿನ್ನೆಲೆ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ತೋರದ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ರಾತ್ರಿ ಇಡೀ ಮಳೆಯಾದ ಪರಿಣಾಮ ಮಂಡಿಯುದ್ದ ನೀರು ನಿಂತು ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಗಿದೆ. ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆಗಳೆಲ್ಲಾ ಕರೆಯಂತಾಗಿದೆ. ಈ ಸಮಸ್ಯೆ ಬಗೆಹರಿಸದ ಬಿಬಿಎಂಪಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಮಳೆಗೆ ರಸ್ತೆಗುಂಡಿ ಕಾಣದೇ ಬೈಕ್ ಮೇಲಿಂದ ಬಿದ್ದ ಸವಾರ
ಮಳೆಗೆ ರಸ್ತೆಗುಂಡಿ ಕಾಣದೇ ಬೈಕ್ ಮೇಲಿಂದ ಬಿದ್ದ ಸವಾರ ಘಟನೆ ಎಂಎಸ್ ಪಾಳ್ಯ ಜಂಕ್ಷನ್ ಬಳಿ ನಡೆದಿದ್ದು, ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದೆ. ಕೆಲಸ ಮುಗಿಸಿಕೊಂಡು ಮಳೆಯ ನಡುವೆ ಬೈಕ್ ಮೂಲಕ ಮನೆಗೆ ವಾಪಸ್ಸಾಗುತ್ತಿದ್ದ ಯುವಕ ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ಎಂಎಸ್ ಪಾಳ್ಯ ಜಂಕ್ಷನ್ ಬಳಿ ಮಳೆನೀರಿನಿಂದ ತುಂಬಿದ್ದ ರಸ್ತೆ ಗುಂಡಿಗೆ ಬಿದಿದ್ದಾನೆ. ಕಾಮಗಾರಿಗೆಂದು ಅಗೆದು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಈ ಅವಘಡ ಸಂಭವಿಸಿದ್ದು, ಗಾಯಾಳು ಸವಾರನನ್ನ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಳೆಯಿಂದ ಮುರಿದುಬಿದ್ದ ಮರದ ರೆಂಬೆ
ನಗರದಲ್ಲಿ ಸುರಿದ ಭಾರೀ ಮಳೆಯಿಂದ ಮರದ ರೆಂಬೆ ಮುರಿದುಬಿದ್ದ ಘಟನೆ ಮೇಖ್ರಿ ಸರ್ಕಲ್ನ ಸ್ಕೈವಾಕ್ ಬಳಿ ನಡೆದಿದೆ. ರಸ್ತೆ ಮೇಲೆ ರೆಂಬೆ ಬಿದ್ದಿರುವ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯ್ತು. ಸ್ಥಳಕ್ಕೆ ಆಗಮನಿಸಿದ ಬಿಬಿಎಂಪಿ ಸಿಬ್ಬಂದಿಯಿಂದ ರೆಂಬೆ ತೆರವು ಕಾರ್ಯಾಚರಣೆ ನಡೆಸಲಾಯಿತು.
Published On - 9:20 am, Tue, 2 August 22