ಬೆಂಗಳೂರು: ಹಿಜಾಬ್ (Hijab) ಗಲಾಟೆ ಮಾಡುವ ವಿಷಯ ಅಲ್ಲ. ಬಹಳ ವರ್ಷಗಳಿಂದ ಮುಸ್ಲಿಂ ಯುವತಿಯರು ಧರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಈಗ ಇದ್ದಕ್ಕಿದ್ದಂತೆ ಇದನ್ನು ವಿವಾದ ಮಾಡಲಾಗಿದೆ. ಹಿಂದೂ ಧರ್ಮ ಗಟ್ಟಿಗೊಳಿಸಿ ಮತ ಕ್ರೋಢೀಕರಣಕ್ಕೆ ವಿವಾದ ಸೃಷ್ಟಿಸಿದ್ದಾರೆ. ಕೇಸರಿ ಶಾಲನ್ನು ವಿದ್ಯಾರ್ಥಿಗಳು ಖರೀದಿಸಿ ಹಾಕಿಕೊಂಡಿಲ್ಲ. ಸಂಘ ಪರಿವಾರದವರೇ ಅದನ್ನು ಖರೀದಿಸಿ ನೀಡಿದ್ದಾರೆ. ಮಕ್ಕಳಿಗೆ ಒತ್ತಾಯದಿಂದ ಕೇಸರಿ ಶಾಲು ಹಾಕಿ ಕಳಿಸಿದ್ದಾರೆ. ಸಮವಸ್ತ್ರದ ಹೆಸರಲ್ಲಿ ದ್ವೇಷದ ಭಾವನೆ ಹುಟ್ಟಿಸುವ ಉದ್ದೇಶ ಅಂತ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಜನ ಕಷ್ಟ ಎದುರಿಸಬೇಕಾಗಿದೆ. ಬಿಜೆಪಿಯವರು ಭಾವನಾತ್ಮಕ ವಿಚಾರ ಜನರ ಮುಂದಿಟ್ಟು ಧರ್ಮ, ಜಾತಿ ನಶೆಯನ್ನು ಜನರಿಗೆ ಅಂಟಿಸಿದ್ದಾರೆ. ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನಿಂತಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ. ಇದನ್ನೆಲ್ಲ ಮುಚ್ಚಲು ಭಾವನಾತ್ಮಕ ವಿಚಾರ ಜನರ ಮುಂದಿಡುತ್ತಿದ್ದಾರೆ ಅಂತ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆರು ಮಂದಿ ವಿದ್ಯಾರ್ಥಿಗಳು ಅವರ ನಂಬಿಕೆ ಪ್ರಕಾರ ನಡೆದುಕೊಳ್ಳುತ್ತಾರೆ. ಹಿಜಾಬ್ ಧರಿಸಿದರೆ ಯಾರಿಗಾದರೂ ಬೇರೆಯವರಿಗೆ ತೊಂದರೆ ಆಗಿತ್ತಾ? ಆ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಿದ್ದೀರಿ ಅಂತ ಪ್ರಿನ್ಸಿಪಾಲ್ ಗೇಟ್ ಹಾಕುತ್ತಾರೆ ಅಂದರೆ ಇದಕ್ಕಿಂತ ಅಮಾನವೀಯವಾಗಿದ್ದು ಇಲ್ಲ. ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇದ್ದಿದ್ದರೆ ಪ್ರಿನ್ಸಿಪಾಲ್ ಸಸ್ಪೆಂಡ್ ಮಾಡಬೇಕಾಗಿತ್ತು. ಮಕ್ಕಳಲ್ಲಿ ಧರ್ಮ, ಜಾತಿ ತುಂಬಿ ಮಕ್ಕಳನ್ನು ಹಾಳು ಮಾಡುವ ಕೆಲಸ ಬಿಜೆಪಿ ಸಂಘ ಪರಿವಾರ ಮಾಡುತ್ತಿದ್ದಾರೆ. ದೇಶದಲ್ಲಿ ಏನು ಅಪಾಯ ಆಗಬಹುದು ಇವರು ಊಹಿಸಲಿಲ್ಲ. ರಾಷ್ಟ್ರಧ್ವಜ ಇಳಿಸಿ ಕೇಸರಿ ಝಂಡಾ ಮೇಲಕ್ಕೆ ಏರಿಸುವ ಕೆಲಸ ಮಾಡುತ್ತಾರೆ. ಇದನ್ನು ಖಂಡಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ:
ಕೇಸರಿ ಪೇಟ ಧರಿಸುವಾಗ ತಲೆಯಲ್ಲಿ ಸಗಣಿಯಿತ್ತಾ. ಕೇಸರಿ ಪೇಟವನ್ನು ಧರಿಸಿದವರು ಬಳಿಕ ಬಿಸಾಕಿದ್ದಾರೆ. ಕೇಸರಿ ಎಂಬುದು ತ್ಯಾಗ ಮತ್ತು ಬಲಿದಾನದ ಸಂಕೇತ ಅಂತ ಚಿತ್ರದುರ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಕಣ್ಣಿಗೆ ಬರೀ ಹಿಂದೂ ಎಂಬುದು ಕಾಣುತ್ತದೆ. ರಾಷ್ಟ್ರಧ್ವಜದ ಬಗ್ಗೆ ನಮಗೆ ಗೌರವ ಇದೆ. ಡಿಕೆಶಿ ರಾಷ್ಟ್ರಧ್ವಜದ ವಿಚಾರ ರಾಜಕಾರಣಕ್ಕೆ ಬಳಸಿದ್ದಾರೆ. ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆಂದು ಹೇಳಿದ್ದಾರೆ. ಡಿಕೆಶಿ ಹೇಳಿಕೆ ರಾಷ್ಟ್ರಧ್ವಜಕ್ಕೆ ಮಾಡಿರುವ ಅಪಮಾನ. ಉಡುಪಿ ಶಾಲೆಯಲ್ಲಿ 6 ಜನ ಮಾತ್ರ ಹಿಜಾಬ್ ಧರಿಸಿದ್ದರು. ಉಳಿದ 90 ಮುಸ್ಲಿಂ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿದ್ದರು. 6 ಮಕ್ಕಳಿಗೆ ಸಮಾಧಾನ ಪಡಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಕಾಂಗ್ರೆಸ್, ಮುಸ್ಲಿಂ ಮುಖಂಡರು ಸಮಾಧಾನ ಪಡಿಸಬೇಕಿತ್ತು. ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚಿದು, ಇದನ್ನ ಖಂಡಿಸುತ್ತೇವೆ ಅಂತ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ
ಇದನ್ನೂ ಓದಿ
‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್ ಬಾಸ್ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ
Published On - 1:32 pm, Thu, 10 February 22