ಹಿಜಾಬ್ ವಿಚಾರ ದೊಡ್ಡದು ಮಾಡಿ ಮಕ್ಕಳು ಮನಸ್ಸು ಹಾಳು ಮಾಡಿದ್ದಾರೆ: ರೇಣುಕಾಚಾರ್ಯ ಆಕ್ರೋಶ
Renukacharya: ನಾನು ಅಲ್ಪಸಂಖ್ಯಾತ ವಿರೋಧಿ ಅಲ್ಲ. ಆದರೆ ಕೆಲವರು ನಡೆದುಕೊಳ್ಳುವ ರೀತಿ ಸರಿಯಿಲ್ಲ ಎನ್ನುವುದನ್ನು ಹೇಳಲೇಬೇಕಿದೆ ಎಂದರು.
ಬೆಂಗಳೂರು: ಹಿಜಾಬ್ ವಿಚಾರ ದೊಡ್ಡದು ಮಾಡುವ ಮೂಲಕ ಮಕ್ಕಳ ಮನಸ್ಸು ಹಾಳುಗೆಡವಲಾಗಿದೆ. ಈಗ ಜಮೀರ್, ಖಾದರ್, ತನ್ವೀರ್ ಸೇರಿದಂತೆ ಎಲ್ಲರೂ ಮಾತನಾಡಲು ಮುಂದಾಗುತ್ತಿದ್ದಾರೆ. ಬಿಜೆಪಿ ಪಕ್ಷ ಮತ್ತು ಕರ್ನಾಟಕದ ಸರ್ಕಾರದ ವರ್ಚಸ್ಸು ಹಾಳು ಮಾಡಲು ಹಿಜಾಬ್ ವಿಚಾರವನ್ನು ದೊಡ್ಡದು ಮಾಡಿದರು. ಹಿಂದೆ ತನ್ವೀರ್ ಸೇಠ್ ತಂದೆ ಅಜೀಜ್ ಸೇಠ್ ಕೋಮು ಗಲಭೆ ಮಾಡಿಸಿ ಅವರ ಪಕ್ಷದ ಸಿಎಂ ಅನ್ನೇ ಕೆಳಗಿಳಿಸಿದ ಇತಿಹಾಸವಿದೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಾನು ಅಲ್ಪಸಂಖ್ಯಾತ ವಿರೋಧಿ ಅಲ್ಲ. ಆದರೆ ಕೆಲವರು ನಡೆದುಕೊಳ್ಳುವ ರೀತಿ ಸರಿಯಿಲ್ಲ ಎನ್ನುವುದನ್ನು ಹೇಳಲೇಬೇಕಿದೆ ಎಂದರು.
ಕೇಸರಿ ಶಾಲು ಖರೀದಿ ಮಾಡುವುದು, ಕೊಡುವುದು ನಮ್ಮ ವೈಯಕ್ತಿಕ ವಿಚಾರ. ಕಾಂಗ್ರೆಸ್ ದೇಶ ವಿರೋಧಿಗಳ ಪರವೋ ಅಲ್ಲವೋ ಅಂತಾ ಶಿವಕುಮಾರ್ ಸ್ಪಷ್ಟೀಕರಣ ಕೊಡಲಿ. ರಾಷ್ಟ್ರಧ್ವಜ ಇಳಿಸಿ ಕೇಸರಿಧ್ವಜ ಹಾರಿಸಿದರು ಅಂತಾ ಕಾಂಗ್ರೆಸ್ ಹಸಿ ಸುಳ್ಳು ಹೇಳಿತು. ಸಾಂದರ್ಭಿಕವಾಗಿ ಮುಗ್ಧ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದಾರೆ. ಅವರು ದೇಶಪ್ರೇಮದಿಂದಲೇ ಕೇಸರಿ ಧ್ವಜ ಹಾರಿಸಿರಬಹುದು. ಮಕ್ಕಳಿಗೆ ಅವರ ಕೆಲಸದ ಅರ್ಥ ಗೊತ್ತಾಗಿಲ್ಲ. ಖಾಲಿ ಕಂಬಕ್ಕೆ ಕೇಸರಿ ಧ್ವಜ ಹಾರಿಸಿದ್ದಾರೆ. ಅದು ತಪ್ಪು ಅಂತಾ ನಾನು ಹೇಳಲು ಆಗಲ್ಲ. ರಾಷ್ಟ್ರಧ್ವಜದ ಗೌರವವನ್ನು ವಿದ್ಯಾರ್ಥಿಗಳು ಕಡಿಮೆ ಮಾಡಿಲ್ಲ ಎಂದು ತಿಳಿಸಿದರು. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಮುಗ್ಧರು. ಅಮಾಯಕ ವಿಧ್ಯಾರ್ಥಿಗಳ ಶಿಕ್ಷಣ ಹಾಳಾಗಬಾರದು, ಸಮವಸ್ತ್ರ ಧರಿಸಿ ಶಾಲೆಗೆ ಬನ್ನಿ ಎಂದು ಸಲಹೆ ಮಾಡಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ದೊಡ್ಡವರು. ಅವರ ಬಗ್ಗೆ ಮಾತನಾಡಲು ನಾನು ಸಣ್ಣವನಾಗುತ್ತಾನೆ. ಅವರು ಕನಕಪುರದ ಬಂಡೆ ಒಡೆದು ಸಾಗಿಸಿ ಭ್ರಷ್ಟಾಚಾರ ಮಾಡಿದ್ದಾರೆ. ವೈಯಕ್ತಿಕವಾಗಿ ಮಾತಾಡಿದರೆ ನನಗೂ ಮಾತಾಡಲು ಬರುತ್ತೆ. ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನದಲ್ಲಿ ಕೂರುವ ಹಗಲುಗನಸು ಕಾಣುತ್ತಿದ್ದಾರೆ ಎಂದರು. ರಾಜಕಾರಣಕ್ಕೆ ಸಂಬಂಧಿಸಿದಂತೆ ಮಾತನಾಡುವುದು ಸಹಜ. ಆದರೆ ವೈಯಕ್ತಿಕ ಟೀಕೆ ಮಾಡಬಾರದು. ಇನ್ನು ಮುಂದಾದರೂ ಗೌರವದಿಂದ ಮಾತನಾಡುವುದು ಕಲಿಯಬೇಕು ಎಂದರು. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿಯ ಬಗ್ಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಗುದ್ದಾಟ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.
ಶಿವಕುಮಾರ್ ಭ್ರಮಾಲೋಕದಲ್ಲಿ ಇರುವುದು ಬೇಡ. ಕರ್ನಾಟಕದಲ್ಲಿ ಈ ಹಿಂದಿನಿಂದಲೂ ಸಮವಸ್ತ್ರ ನೀತಿ ಅಸ್ತಿತ್ವದಲ್ಲಿದೆ. ಇಂದು ಹಿಜಾಬ್ ವಿಚಾರವಾಗಿ ಬೀದಿಗೆ ಬಂದಿರುವ ವಿದ್ಯಾರ್ಥಿನಿಯರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳ ಕೈಚಳಕ ಇದೆ. ಮೇಲಾಗಿ ಕಾಂಗ್ರೆಸ್ ಕೈವಾಡ ಇದೆ ಎಂದರು. ಸಚಿವ ಸ್ಥಾನದ ವಿಚಾರದ ಬಗ್ಗೆ ದೆಹಲಿಯಲ್ಲಿ ವರಿಷ್ಠರನ್ನು ಕಂಡು ಮಾತನಾಡಿದ್ದೇನೆ. ನಾಲ್ಕು ಗೋಡೆಯ ನಡುವೆ ಏನು ಮಾತಾಡಿದ್ದೇನೆ ಎನ್ನುವುದನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದರು.
ಇದನ್ನೂ ಓದಿ: ಎಲ್ಲ ದೇಶವಿರೋಧಿ ಹುಳುಗಳು ಈಗ ಹೊರಗೆ ಬರ್ತಿವೆ: ಹಿಜಾಬ್ ವಿವಾದ ಕುರಿತು ಬಸನಗೌಡ ಯತ್ನಾಳ್
ಇದನ್ನೂ ಓದಿ: ಮತ ಕ್ರೋಢೀಕರಣಕ್ಕಾಗಿ ಹಿಜಾಬ್ ವಿವಾದ, ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಗಲಾಟೆ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ