ಮತಕ್ರೋಢೀಕರಣಕ್ಕಾಗಿ ಹಿಜಾಬ್ ವಿವಾದ, ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಗಲಾಟೆ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
Siddaramaiah: ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇವರು ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ. ಅದನ್ನು ಮುಚ್ಚಿಹಾಕಲು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರು ಕಷ್ಟ ಎದುರಿಸಬೇಕಾಗಿದೆ. ಅವರು ಭಾವನಾತ್ಮಕ ವಿಚಾರ ಜನರ ಮುಂದಿಟ್ಟು ಜನರಿಗೆ ಧರ್ಮ, ಜಾತಿಯ ನಶೆ ಅಂಟಿಸಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ನಿಂತಿವೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇವರು ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ. ಅದನ್ನು ಮುಚ್ಚಿಹಾಕಲು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddramaiah) ವಾಗ್ದಾಳಿ ನಡೆಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಲಪಾಡ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರು ಸಂಕಷ್ಡ ಎದುರಿಸಬೇಕಾಗಿದೆ. ಕಾಂಗ್ರೆಸ್ ಮುಂದೆ ದೊಡ್ಡ ಸವಾಲಿದೆ. ದೇಶ ಉಳಿಸಬೇಕಾಗಿದೆ, ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ದೇಶ ಆರ್ಥಿಕವಾಗಿ ದಿವಾಳಿ ಆಗುತ್ತಿದೆ. ಇದನ್ನು ತಡೆಗಟ್ಟಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಯುವಜನರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಬಿಜೆಪಿ ಜನಪರವಾಗಿ ಏನೂ ಕೆಲಸ ಮಾಡಿಲ್ಲ, ನುಡಿದಂತೆ ನಡೆಯಲಿಲ್ಲ ಎಂದು ಟೀಕಿಸಿದರು.
ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಧರ್ಮ ಜಾತಿಯ ನಶೆಯನ್ನು ಅಂಟಿಸಿದ್ದಾರೆ. ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಹ ಕಳೆದ ಎರಡೂವರೆ ವರ್ಷಗಳಿಂದ ಏನೂ ಮಾಡಲಿಲ್ಲ. ಅಭಿವೃದ್ಧಿ ನಿಂತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.
ಹಿಜಾಬ್ ವಿವಾದ ಸಲ್ಲದು ಹಿಜಾಬ್ ಎನ್ನುವುದು ಗಲಾಟೆ ಮಾಡುವ ವಿಷಯ ಖಂಡಿತ ಅಲ್ಲ. ಹಲವು ವರ್ಷಗಳಿಂದ ಮುಸ್ಲಿಂ ಯುವತಿಯರು ಹಿಜಾಬ್ ಧರಿಸುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ಇದನ್ನು ವಿವಾದ ಮಾಡಲಾಗಿದೆ. ಹಿಂದೂ ಧರ್ಮ ಗಟ್ಟಿಗೊಳಿಸಿ ಮತ ಕ್ರೋಡೀಕರಣಕ್ಕಾಗಿ ಈ ಬೆಳವಣಿಗೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೇಸರಿ ಶಾಲನ್ನು ವಿದ್ಯಾರ್ಥಿಗಳು ಖರೀದಿಸಿ ಹಾಕಿಕೊಂಡಿಲ್ಲ. ಸಂಘ ಪರಿವಾರದವರೇ ಅದನ್ನು ಖರೀದಿಸಿ ನೀಡಿದ್ದಾರೆ. ಒತ್ತಾಯದಿಂದ ಕೇಸರಿ ಶಾಲು ಹಾಕಿ ಕಳಿಸಿದ್ದಾರೆ. ಸಮವಸ್ತ್ರದ ಹೆಸರಲ್ಲಿ ದ್ವೇಷದ ಭಾವನೆ ಹುಟ್ಟಿಸುವುದು ಇವರ ಉದ್ದೇಶ ಎಂದು ಹೇಳಿದರು.
ಇವರು ಎಲ್ಲ ಕಡೆ ಬೆಂಕಿ ಹಚ್ಚಿದ್ದಾರೆ. ಈಗ ಬೆಂಕಿ ನಂದಿಸುವುದೇ ಕಷ್ಟದ ಕೆಲಸ ಆಗಿದೆ. ಸಮವಸ್ತ್ರದ ನೆಪದಲ್ಲಿ ದ್ವೇಷದ ಭಾವನೆ ಹುಟ್ಟು ಹಾಕುವ ಜೊತೆಗೆ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಕೇಸರಿ ಶಾಲು ಹಾಕಿಸಿದ್ದು ಯಾರು ತನಿಖೆ ಮಾಡಿ ಶಿಕ್ಷೆ ಕೊಡಿ ಅವರಿಗೆ ಎಂದು ಆಗ್ರಹಿಸಿದರು.
ನಮ್ಮ ಯುವಕರು ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳಬೇಕು. ನರೇಂದ್ರ ಮೋದಿಯಿಂದ ನಾವು ದೇಶಭಕ್ತಿ ಕಲಿಬೇಕಾಯ್ತಲ್ಲ ಎಂಬ ವ್ಯಥೆ ನಮಗಿದೆ. ನರೇಂದ್ರ ಮೋದಿ ಹುಟ್ಟಿದ್ದೇ ಸ್ವಾತಂತ್ರ್ಯ ಬಂದ ಮೇಲೆ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಆಗಿದೆ. ಆದರೆ ಮೋದಿ ಅವರಿಗೆ ಇಷ್ಟು ವಯಸ್ಸು ಆಗಿಲ್ಲ. ಬಿಜೆಪಿಯವರು ಯಾರಾದರೂ ಸ್ವಾತಂತ್ರ್ರಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರಾ, ಆಸ್ತಿ ಕಳೆದಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಯಾವುದಾದರೂ ರಾಜಕೀಯ ಪಕ್ಷ ದೇಶಕ್ಕೋಸ್ಕರ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡಿದ್ರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಪುನರುಚ್ಚರಿಸಿದರು.
ಮತ ಕ್ರೋಢೀಕರಣಕ್ಕೆ ಇವರು ಮುಂದಾಗಿದ್ದಾರೆ. ಅದಕ್ಕಾಗಿಯೇ ಈ ವಿವಾದ ತಲೆದೋರಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಳ್ಳುವೆ. ಸಂಘ ಪರಿವಾರದವರು ಉಡುಪಿ-ಮಂಗಳೂರು ಮಾತ್ರವಲ್ಲ. ಇಡೀ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಮನೆಮನೆಗೆ ಬೆಂಕಿ ಬಿದ್ದಿದೆ. ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಬೇಕು ಎನ್ನುತ್ತಿದ್ದಾರೆ. ರಾಜ್ಯಕ್ಕೆ ವಿಷ ಹಾಕಿದ್ದಾರೆ ಜಾತೀಯತೆ ಎನ್ನುವುದು ಭ್ರಷ್ಟಾಚಾರಕ್ಕಿಂತ ಅಪಾಯಕಾರಿ ಎಂದರು.
ಇದನ್ನೂ ಓದಿ: ಹಿಜಾಬ್ ಗಲಾಟೆ ಮಾಡುವ ವಿಷಯ ಅಲ್ಲ, ಬಹಳ ವರ್ಷಗಳಿಂದ ಮುಸ್ಲಿಂ ಯುವತಿಯರು ಧರಿಸುತ್ತಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ