ಹಿಜಾಬ್-ಕೇಸರಿ ವಿವಾದಕ್ಕೆ ತುಪ್ಪ ಸುರಿಯಲು ಕಿಡಿಗೇಡಿಗಳಿಂದ ಷಡ್ಯಂತ್ರ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಫೇಕ್ ಅಂದ ರಾಯಚೂರು ಎಸ್ಪಿ
ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಕೇಸರಿ ಶಾಲು ಸಮರಕ್ಕೆ ಮತ್ತಷ್ಟು ತುಪ್ಪ ಸುರಿಯಲು ರಾಯಚೂರಿನಲ್ಲಿ ಕೆಲ ಕಿಡಿಗೇಡಿಗಳು ಪ್ರಚೋದನೆಯ ವಿಡಿಯೋ ಹರಿಬಿಟ್ಟಿದ್ದಾರೆ. ಹಳೆ ವಿಡಿಯೋಗೆ ಹಿಜಾಬ್ & ಕೇಸರಿ ಶಾಲು ವಿವಾದವನ್ನು ಲಿಂಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ.
ರಾಯಚೂರು: ರಾಜ್ಯದಲ್ಲಿ ಹಿಜಾಬ್(Hijab) ಮತ್ತು ಕೇಸರಿ ಶಾಲುಗಳ(Kesari Shawl) ನಡುವಿನ ವಿವಾದ ತಾರಕಕ್ಕೇರಿದೆ. ಜೊತೆಯಲ್ಲಿ ಕೂತು ಪಾಠ, ಊಟ, ನಕ್ಕು ನಲಿಯುತ್ತಿದ್ದವರ ನಡುವೆ ದ್ವೇಷ, ಗಲಾಟೆ ಹುಟ್ಟಿಕೊಂಡಿದೆ. ವಿದ್ಯಾರ್ಥಿಗಳ ಕತ್ತಲ್ಲಿ ಏಕಾಏಕಿ ಕೇಸರಿ ಶಾಲುಗಳು ಬಂದಿವೆ. ಜ್ಞಾನ ದೇಗುಲದಲ್ಲಿ ಸಮಾನತೆಯ ಹೆಸರಲ್ಲಿ ಜಾತಿ, ಧರ್ಮದ ಕಿಚ್ಚು ಹತ್ತಿಕೊಂಡಿದೆ. ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದು ಕೆಲ ಕಿಡಿಗೇಡಿಗಳು ಸಂದರ್ಭವನ್ನು ಬಳಸಿಕೊಂಡು ಮತ್ತಷ್ಟು ಸಮಸ್ಯೆಯನ್ನು ಉಲ್ಬಣ ಮಾಡಲು ಮುಂದಾಗಿದ್ದಾರೆ. ಕಿಡಿಗೇಡಿಗಳು ರಾಯಚೂರು ಜಿಲ್ಲೆಯಲ್ಲಿ ಪ್ರಚೋದನೆಯ ವಿಡಿಯೋ ಹರಿಬಿಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಕೇಸರಿ ಶಾಲು ಸಮರಕ್ಕೆ ಮತ್ತಷ್ಟು ತುಪ್ಪ ಸುರಿಯಲು ರಾಯಚೂರಿನಲ್ಲಿ ಕೆಲ ಕಿಡಿಗೇಡಿಗಳು ಪ್ರಚೋದನೆಯ ವಿಡಿಯೋ ಹರಿಬಿಟ್ಟಿದ್ದಾರೆ. ಹಳೆ ವಿಡಿಯೋಗೆ ಹಿಜಾಬ್ & ಕೇಸರಿ ಶಾಲು ವಿವಾದವನ್ನು ಲಿಂಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಕಿಡಿಗೇಡಿಗಳು, ಕಾಲೇಜು ಪ್ರಿನ್ಸಿಪಲ್ಗೆ ಎಸ್ಡಿಪಿಐ(SDPI) ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ ಅಂತ ಬಿಂಬಿಸಿದ್ದಾರೆ. ಸದ್ಯ ಈ ಬಗ್ಗೆ ಟಿವಿ9 ಗೆ ರಾಯಚೂರು ಎಸ್ಪಿ ನಿಖಿಲ್.ಬಿ. ಸ್ಪಷ್ಟನೆ ನೀಡಿದ್ದು ಇದು ಹಿಜಾಬ್ & ಕೇಸರಿ ಶಾಲು ವಿಚಾರದ ಗಲಾಟೆಯಲ್ಲ. ಈ ಬಗ್ಗೆ ಗಮನ ಹರಿಸದಂತೆ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇದೇ ಜನವರಿನ 31 ರಂದು ನಡೆದಿದ್ದ ಘಟನೆಯನ್ನು ತಿರುಚಿ ಹಿಜಾಬ್ & ಕೇಸರಿ ಶಾಲು ಗಲಾಟೆಗೆ ಲಿಂಕ್ ಮಾಡಲಾಗಿದೆ. ಮುದಗಲ್ ಪಟ್ಟಣದಲ್ಲಿ ಇದೇ ಜನವರಿನ 31 ರಂದು ಧರ್ಮದ ಪ್ರಚಾರಕ್ಕೆ ಲಿಂಗಸುಗೂರು ಚರ್ಚ್ನ ಫಾದರ್ ಮಲ್ಲೇಶಪ್ಪ ಪಾಲ್ ಜಾನ್ ಮುದಗಲ್ಗೆ ಬಂದಿದ್ದರು. ಈ ವೇಳೆ ಮುಸ್ಲಿಂ ಸಮುದಾಯದವರಿರೊ ಏರಿಯಾದಲ್ಲಿ ಪ್ರಚಾರ ಮಾಡಿದ್ದರು. ಆಗ ಸ್ಥಳೀಯರು ಫಾದರ್ ಮಲ್ಲೇಶಪ್ಪನಿಗೆ ತರಾಟೆಗೆ ತೆಗೆದುಕೊಂಡಿದ್ದರು. ಆಗ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತ ಹಿಮದ್ ರಜಾಕ್ ಹಾಗೂ ಪಾಷಾರು ಫಾದರ್ಗೆ ವಾರ್ನಿಂಗ್ ಮಾಡಿ ಕಳಿಸಿದ್ದರು. ಈ ಬಗ್ಗೆ ಮುದಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫಾದರ್ ಮಲ್ಲೇಶಪ್ಪ ಹಾಗೂ ಎಸ್ಡಿಪಿಐ ಕಾರ್ಯಕರ್ತರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಹೀಗಾಗಿ ಜನರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಗಮನ ಹರಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದೇಶದ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧ; ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಭಾಷಣ