ದೇಶದ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧ; ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಭಾಷಣ
ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಸದ್ಯ ಹಿಜಾಬ್ ಸಂಘರ್ಷವಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳು ತುಂಬ ಮಹತ್ವ ಪಡೆದಿವೆ.
ಇಂದು ಪ್ರಧಾನಮಂತ್ರಿ ಮೋದಿಯವರು (PM Narendra Modi) ಉತ್ತರ ಪ್ರದೇಶದಲ್ಲಿ (Uttar Pradesh Assembly Electioin) ತಮ್ಮ ಮೊದಲ ಭೌತಿಕ ಚುನಾವಣಾ ರ್ಯಾಲಿ ನಡೆಸಿದರು. ಈ ವೇಳೆ ಮುಸ್ಲಿಂ ಮಹಿಳೆಯರ ಬಗ್ಗೆ ಮಾತನಾಡಿದ ಅವರು, ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕು ಮತ್ತು ಅಭಿವೃದ್ಧಿಯನ್ನು ತಡೆಯಲು ಕೆಲವರು ಹೊಸಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹಾಗೇ, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ (Muslim Women) ಮೇಲಿನ ದೌರ್ಜನ್ಯ ತಡೆಯಲು ಇಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ನಿಂದ ಮುಕ್ತಗೊಳಿಸಿದೆ. ಅದಾದ ಬಳಿಕ ಅವರು ಬಹಿರಂಗವಾಗಿಯೇ ಮೋದಿ ಸರ್ಕಾರವನ್ನು ಬೆಂಬಲಿಸಲು ಶುರು ಮಾಡಿದರು. ಇದರಿಂದ ಪ್ರತಿಪಕ್ಷಗಳು ಆತಂಕಕ್ಕೀಡಾಗಿವೆ. ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಇಂದಿನ ರ್ಯಾಲಿಯಲ್ಲಿ ಹೇಳಿದರು.
ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಸದ್ಯ ಹಿಜಾಬ್ ಸಂಘರ್ಷವಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಈ ಮಾತು ತುಂಬ ಮಹತ್ವ ಪಡೆದಿದೆ. ಕುಂದಾಪುರದ ಒಂದು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕ್ಲಾಸಿಗೆ ಹೊರಟಿದ್ದ ಆರು ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು, ಗೇಟ್ ಬಾಗಿಲು ಹಾಕಿದಾಗಿನಿಂದ ಶುರುವಾದ ವಿವಾದ ಇದೀಗ ಹೆಚ್ಚಾಗಿದೆ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಕ್ಲಾಸಿಗೆ ಬಂದರೆ, ನಾವೂ ಕೂಡ ಕೇಸರಿ ಶಾಲು ಹಾಕಿ ಬರುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ಮಧ್ಯೆ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಹಿಜಾಬ್ ವಿವಾದವೀಗ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಹಿಜಾಬ್ ಕಾರಣಕ್ಕೆ ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
The mood in Saharanpur is clear- people want BJP! https://t.co/SDzKtk1ouf
— Narendra Modi (@narendramodi) February 10, 2022
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ: ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿ, ಈ ಹಿಂದೆ ಉತ್ತರಪ್ರದೇಶವನ್ನು ಆಳಿದ ಸರ್ಕಾರಗಳು ಅವರ ಕುಟುಂಬದ ಹೊರತಾಗಿ ಇನ್ನೇನೂ ನೋಡಲೇ ಇಲ್ಲ. ಆ ಪಕ್ಷಗಳು ತಮ್ಮ ಕುಟುಂಬಕ್ಕಾಗಿ ಆಡಳಿತ ನಡೆಸಿದ್ದಾರೆಯೇ ಹೊರತು ಇಲ್ಲಿನ ಜನರನ್ನು ಕಾಳಜಿ ಮಾಡಲಿಲ್ಲ ಎಂದು ಹೇಳಿದರು. ಸಿಎಂ ಯೋಗಿ ಆಡಳಿತವನ್ನು ಹೊಗಳಿದ ಪ್ರಧಾನಿ ಮೋದಿ, ಇಲ್ಲಿನ ಬಡವರಿಗೆ ಬಿಜೆಪಿ ಸರ್ಕಾರ ಮನೆಗಳನ್ನು ನೀಡಿದೆ. ಉತ್ತಮ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ ಎಂದು ಹೇಳಿದರು. ಅಷ್ಟೇ ಅಲ್ಲ, ರೈತರ ಖಾತೆಗೆ ನೇರವಾಗಿ ಹೋಗಬೇಕು ಎಂದರೆ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂದೂ ಹೇಳಿದರು.
ಉತ್ತರಪ್ರದೇಶದಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ಸಾರ್ವಜನಿಕ ಅಭಿವೃದ್ಧಿಗೆ ಪೂರಕವಾಗಿದೆ. ನಮ್ಮ ಡಬಲ್ ಎಂಜಿನ್ ಸರ್ಕಾರ ಯುಪಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ರಸ್ತೆ ನಿರ್ಮಾಣದ ಮೂಲಕ ಸಂಪರ್ಕ ಅಭಿವೃದ್ಧಿಗೊಳಿಸಿದೆ ಎಂದು ಹೇಳಿದ ಪ್ರಧಾನಮಂತ್ರಿ, ಇಲ್ಲಿನ ಜನರು ಈ ಚುನಾವಣೆಯಲ್ಲಿ ಮತ ಹಾಕುವಾಗ ಎಚ್ಚರ ವಹಿಸಬೇಕು. ಯಾರು ನಿಮ್ಮ ಸಹೋದರಿ/ ಹೆಣ್ಣುಮಕ್ಕಳನ್ನ ಸುರಕ್ಷಿತ ಮಾಡುತ್ತಾರೋ, ಯಾರು ಉತ್ತರ ಪ್ರದೇಶವನ್ನು ದಂಗೆ ಮುಕ್ತವನ್ನಾಗಿ ಮಾಡುತ್ತಾರೋ ಅವರಿಗೆ ಮತ ಹಾಕಬೇಕು ಎಂದು ಹೇಳಿದರು.
ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ; ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್
Published On - 1:46 pm, Thu, 10 February 22