ಎಲ್ಲ ದೇಶವಿರೋಧಿ ಹುಳುಗಳು ಈಗ ಹೊರಗೆ ಬರ್ತಿವೆ: ಹಿಜಾಬ್ ವಿವಾದ ಕುರಿತು ಬಸನಗೌಡ ಯತ್ನಾಳ್
Basanagouda Yatnal: ಕಾಲೇಜು ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದ ವಿದ್ಯಾರ್ಥಿನಿಗೆ ಬಹುಮಾನ ಘೋಷಣೆ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಯತ್ನಾಳ ಆಗ್ರಹಿಸಿದರು.
ವಿಜಯಪುರ: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಹಿಜಾಬ್-ಕೇಸರಿಶಾಲು ವಿವಾದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ಶಾಸಕ ಬಸನಗೌಡ ಯತ್ನಾಳ ಹಿಜಾಬ್ ವಿವಾದದ ಬಳಿಕ ಯಾವ ಬೆದರಿಕೆ ಕರೆಗಳೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ಕಾಲೇಜು ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದ ವಿದ್ಯಾರ್ಥಿನಿಗೆ ಬಹುಮಾನ ಘೋಷಣೆ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ, ಯಾವ ಘಟನೆ ಇದೆ ಹಾಗೂ ಬಹುಮಾನ ಘೋಷಣೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಗೃಹ ಇಲಾಖೆಯು ಈ ಪ್ರಕಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿಗೆ ಇಮ್ರಾನ್ ಪಾಷಾ ₹1 ಲಕ್ಷದ ಚೆಕ್ ಕೊಟ್ಟ ವಿಚಾರ ಪ್ರತಿಕ್ರಿಯಿಸಿದ ಅವರು, ಟಿಂಚರ್ ಹಾಕಿದಾಗ ಗಾಯದಿಂದ ಹುಳುಗಳು ಹೊರಗೆ ಬಂದಂತೆ ಎಲ್ಲ ದೇಶ ವಿರೋಧಿ ಹುಳುಗಳು ಈಗ ಹೊರಗೆ ಬೀಳುತ್ತಿವೆ ಎಂದು ಹೇಳಿದರು. ಯತ್ನಾಳ್ ಮೇಲೆ ಹಲ್ಲೆ ನಡೆಸಲಾಗುವುದು ಎಂಬ ಬೆದರಿಕೆ ಕುರಿತು ಪ್ರಸ್ತಾಪಿಸಿದ ಅವರು, ಚಿಲ್ಲರೆ ಜನರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ವಿಚಾರಗಳನ್ನು ಗಮನಿಸುತ್ತಿದೆ. ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಇಂಥವರು ಬಹಳ ಜನರಿದ್ದಾರೆ ಎಂದರು.
ಕಾಂಗ್ರೆಸ್ನಿಂದ ಎಂದಿಗೂ ದೇಶದ ರಕ್ಷಣೆ ಸಾಧ್ಯವಿಲ್ಲ. ಅವರು ಸದಾ ತುಕ್ಡೆ ತುಕ್ಡೆ ಗ್ಯಾಂಗ್ಗಳಿಗೆ ಬೆಂಬಲ ಕೊಡುತ್ತಾರೆ. ಈ ಗ್ಯಾಂಗ್ಗಳು ಪಾಕಿಸ್ತಾನದ ಐಎಸ್‌ಐ ಜೊತೆಗೆ ಸಂಪರ್ಕ ಹೊಂದಿವೆ. ಹಿಜಾಬ್ ವಿವಾದ ಬಳಿಕ ಇವರ ಬಣ್ಣ ಬಯಲಾಗುತ್ತಿದೆ. ಹಿಜಾಬ್ ಗದ್ದಲ ಎಬ್ಬಿಸಿದವರು ದೇಶಕ್ಕೆ ಒಂದಿಲ್ಲ ಒಂದು ದಿನ ಮಾರಕ ಆಗುತ್ತಾರೆ. ಇಂಥವರನ್ನು ಬಗ್ಗು ಬಡಿಯಲೇ ಬೇಕು. ಈ ವಿವಾದದಲ್ಲಿ ಇರುವವರು ಪಡೆಯುತ್ತಿರುವ ಸರ್ಕಾರಿ ಸೌಲಭ್ಯ ಕಟ್ ಮಾಡಬೇಕು ಎಂದರು.
ಗೃಹ ಇಲಾಖೆ ಹಲವು ಮಾಹಿತಿಗಳನ್ನು ಕಲಲೆಹಾಕಿದೆ. ಹೈಕೋರ್ಟ್ ತೀರ್ಮಾನದ ಬಳಿಕ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಟ್ರೇನಿಂಗ್ ನೀಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಉಡುಪಿ ಶಾಸಕರು ಸಾಕಷ್ಟು ವಿಷಯ ಬಹಿರಂಗಪಡಿಸಿದ್ದಾರೆ. ಇಷ್ಟು ದಿನ ಯುವತಿಯರು ಹಿಜಾಬ್ ಹಾಕುತ್ತಿರಲಿಲ್ಲ. ಶಾಸಕರು ಸಹ ದಾಖಲೆಗಳನ್ನು ಒದಗಿಸಿದ್ದಾರೆ ಎಂದರು.
ಕರ್ನಾಟಕದ ಕರಾವಳಿ ಭಾಗದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳು ಚುರುಕಾಗುತ್ತಿವೆ. ವ್ಯವಸ್ಥಿತವಾಗಿ ಟ್ರೇನಿಂಗ್ ಕೊಡಲಾಗುತ್ತಿದೆ. ಹೀಗಾಗಿ ಈ ಪ್ರದೇಶಕ್ಕೆ ಗೃಹ ಇಲಾಖೆಯು ಅತ್ಯುತ್ತಮ ಅಧಿಕಾರಿಗಳನ್ನು ನೇಮಿಸಲು ಮುಂದಾಗಿದೆ ಎಂದು ಹೇಳಿದರು.
ಅಧಿಕಾರಕ್ಕಾಗಿ ಗುರುಪೀಠ ಬಳಕೆ: ನಿರಾಣಿ ವಿರುದ್ಧ ವಾಗ್ದಾಳಿ
ಸದಾ ಅಧಿಕಾರದ ಚಿಂತೆ ಮಾಡುವ ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರ ಸಿಗದೆ ಇದ್ದಾಗ ಧಾರ್ಮಿಕ ಪೀಠಗಳನ್ನು ಬಳಸಿಕೊಳ್ಳುತ್ತಾರೆ. ಇಡೀ ಸಮುದಾಯವನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈಗ ಆ ಕಾಲ ಬದಲಾಗಿದೆ, ಜನ ಜಾಗೃತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಇವರಿಗೆ ಸರಿಯಾಗಿ ಉತ್ತರ ಕೊಡುತ್ತಾರೆ ಎಂದರು.
ಇದನ್ನೂ ಓದಿ: ಮತಕ್ರೋಢೀಕರಣಕ್ಕಾಗಿ ಹಿಜಾಬ್ ವಿವಾದ, ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಗಲಾಟೆ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಇದನ್ನೂ ಓದಿ: ಹಿಜಾಬ್ V/S ಕೇಸರಿ ಶಾಲು ಸಂಘರ್ಷ! ಹೊರಗಡೆಯವರು ಪ್ರಚೋದನೆ ನೀಡುತ್ತಿದ್ದಾರೆ; ಸಿಎಂ ಬೊಮ್ಮಾಯಿ