siddeshwara swamiji: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ: ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 02, 2023 | 10:53 PM

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಇಂದು(ಜ.2) ಅಸ್ತಂಗತರಾಗಿದ್ದಾರೆ.

siddeshwara swamiji: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ: ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ
Siddeshwar Swamiji
Follow us on

ಬೆಂಗಳೂರು: ನಡೆದಾಡುವ ದೇವರು ಎಂದು ಖ್ಯಾತಿ ಹೊಂದಿದ್ದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddeshwar swamiji) ಅವರು ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನದಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು (ಜ.2) ಅಸ್ತಂಗತರಾಗಿದ್ದಾರೆ. ಕೋಟ್ಯಾಂತರ ಭಕ್ತರನ್ನು ಸಿದ್ದೇಶ್ವರ ಸ್ವಾಮೀಜಿಗಳು ಅಗಲಿದ್ದಾರೆ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಕಂಬನಿ ಮಿಡಿದಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಂಬನಿ

ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಂಬನಿ ಮಿಡಿದಿದ್ದು, ಸಿದ್ದೇಶ್ವರ ಸ್ವಾಮೀಜಿ ಅವರು ಮಲ್ಲಿಕಾರ್ಜುನ ಸ್ವಾಮೀಜಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಬಂದವರು. ಅವರ ಸರಳ ಜೀವನ, ಶಾಂತ ಸ್ವಭಾವ ಹಾಗೂ ಅನುಭಾವದ ನುಡಿಗಳು ನಮಗೆಲ್ಲ ದಾರಿದೀಪವಾಗಿವೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ನೈಪುಣ್ಯತೆಯನ್ನು ಹೊಂದಿದ್ದರು. ಅವರ ಪ್ರವಚನಗಳು ರಾಜ್ಯವಲ್ಲದೇ ಮಹಾರಾಷ್ಟ್ರದಲ್ಲಿ ಸಹ ಪ್ರಸಿದ್ಧಿ ಗಳಿಸಿದ್ದವು.

ಅವರ ಸರಳ ಸಜ್ಜನಿಕೆಯ ಜೀವನ, ಅವರು ನಡೆದು ಬಂದ ಹಾದಿ ನಮಗೆಲ್ಲ ಆದರ್ಶವಾಗಿವೆ. ಜ್ಞಾನಯೋಗಾಶ್ರಮದ ಮೂಲಕ ವಿದ್ಯೆಯ ಜೊತೆಗೆ ದಾಸೋಹದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಟ್ಟವರಾಗಿದ್ದರು. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಕ್ತರಿಗೆ, ವಿದ್ಯಾರ್ಥಿಗಳಿಗೆ ದೇವರು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

 

Published On - 10:49 pm, Mon, 2 January 23