ಬೆಂಗಳೂರು: ಅ.25ರ ಮಂಗಳವಾರ ಸೂರ್ಯ ಗ್ರಹಣ ಹಿನ್ನೆಲೆ ನಾಳೆ ರಾಜ್ಯದೆಲ್ಲೆಡೆ ಹಲವು ದೇವಸ್ಥಾನಗಳು ಬಂದ್ ಆಗಲಿವೆ. ಮಂಡ್ಯ, ಮೈಸೂರು, ಕೋಲಾರ, ಬಾಗಲಕೋಟೆ ಸೇರಿದಂತೆ ಪ್ರಸಿದ್ಧ ದೇಗುಲಗಳು ಬಂದ್ ಆಗಲಿದ್ದು ಸೂರ್ಯ ಗ್ರಹಣ ಮುಗಿದ ಬಳಿಕ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ. ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಕೃಷ್ಣ ಮಠ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಮಲೆ ಮಹದೇಶ್ವರದಂತಹ ಕೆಲ ದೇವಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ದೇವಸ್ಥಾನ ಸಮೀತಿ ತಿಳಿಸಿದೆ.
ಯಾವ ಯಾವ ದೇವಾಲಯಗಳು ಬಂದ್
ಸೂರ್ಯ ಗ್ರಹಣ ಹಿನ್ನೆಲೆ ಬೆಂಗಳೂರಿನಲ್ಲಿ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ನಾಳೆ ಬೆಳಗ್ಗೆ 6 ರಿಂದ ಬೆಳಗ್ಗೆ 8ರವರೆಗೆ ಮಾತ್ರ ದೇವಸ್ಥಾನ ಓಪನ್ ಆಗಲಿದ್ದು ಪುನಃ ಗ್ರಹಣ ಮುಗಿದ ಬಳಿಕ ಸಂಜೆ ದೇಗುಲದ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುತ್ತೆ.
ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 8ರಿಂದ ದೇಗುಲ ಬಂದ್ ಆಗಲಿದೆ. ಈ ಬಾರಿಯ ದೀಪಾವಳಿ ಉಪಯುಕ್ತ ಹಾಗೂ ಅನುಪಯುಕ್ತವಾಗಿದೆ. ದೀಪಾವಳಿಯ ದಿನ ಗೋಚರವಾಗುತ್ತಿರುವ ಗ್ರಹಣ ವೈಶಿಷ್ಟ್ಯವಾಗಿರುತ್ತೆ. ಇದು ಈ ವರ್ಷದ ಕಡೆಯ ಗ್ರಹಣ. ಅರ್ಧ ಕಷ್ಟ, ಅರ್ಧದಷ್ಟು ಸುಖ ಇರಲಿದೆ. ಹಬ್ಬದ ದಿನ ಸೂರ್ಯಗ್ರಹಣ ಎಲ್ಲಾರ ಮನಸ್ಸಿಗೂ ತೊಂದರೆ ಭಾವ ಇದೆ. ಹೀಗಾಗಿ ವಿಶೇಷ ಪೂಜೆ ಅಭಿಷೇಕಗಳನ್ನ ಮಾಡಲಾಗುತ್ತಿದೆ. ಇಂದು ಕೇದಾರೇಶ್ವರ ವ್ರತ ಆಚರಣೆ ಮಾಡ್ತೇವೆ. ನಾಳೆ ಗ್ರಹಣ ಹಿನ್ನೆಲೆ ವ್ರತವನ್ನ ಇಂದೇ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆ 8 ಗಂಟೆ ಒಳಗೆ ನಿತ್ಯ ಅಭಿಷೇಕ ಮಾಡಿ ದೇವಸ್ಥಾನವನ್ನ ಬಂದ್ ಮಾಡಲಾಗುತ್ತೆ. 6.32ಕ್ಕೆ ಗ್ರಹಣದ ಬಳಿಕ ದೇವಸ್ಥಾನ ತೆರೆದು ಶುದ್ಧ ಮಾಡಿ ಅಭಿಷೇಕ ಮಾಡಲಾಗುತ್ತೆ. ಜನರು ಕೂಡ ನಾಳಿನ ಎಲ್ಲಾ ಕಾರ್ಯಕ್ರಮಗಳನ್ನು ಬುಧವಾರಕ್ಕೆ ಮುಂದೂಡಿ. ಗ್ರಹಣ ಕಾಲದಲ್ಲಿ ಶಿವನ ಧ್ಯಾನ ಮಾಡಿ ಎಂದು ದೇಗುಲದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಮಾಹಿತಿ ನೀಡಿದರು.
ನಾಳೆ ಕೋಲಾರದ ಮುಜರಾಯಿ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕುರುಡುಮಲೆ ವಿನಾಯಕ, ಕೋಲಾರಮ್ಮ, ಬಂಗಾರು ತಿರುಪತಿ, ಚಿಕ್ಕತಿರುಪತಿ, ಸೋಮೇಶ್ವರ, ಹೊಲ್ಲಂಬಳ್ಳಿ ಚೌಡೇಶ್ವರಿ ದೇವಾಲಯ ಸೇರಿದಂತೆ ಎಲ್ಲಾ ಮುಜರಾಯಿ ದೇವಾಲಯಕ್ಕೆ ಮಧ್ಯಾಹ್ನ 12 ಗಂಟೆಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಗ್ರಹಣ ಮೋಕ್ಷ ಕಾಲದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ತಹಶೀಲ್ದಾರ್ ನಾಗವೇಣಿ ಮಾಹಿತಿ ನೀಡಿದ್ದಾರೆ.
ನಿಮಿಷಾಂಬ, ರಂಗನಾಥ ಸ್ವಾಮಿ ದೇಗುಲ ಬಂದ್
ಮಂಡ್ಯದಲ್ಲಿ ನಿಮಿಷಾಂಬ ದೇವಸ್ಥಾನ, ರಂಗನಾಥ ಸ್ವಾಮಿ ದೇಗುಲ ಬಂದ್ ಆಗಲಿದೆ. ನಾಳೆ ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ನಿಮಿಷಾಂಬ ದೇಗುಲ ಬಂದ್ ಆಗಿರಲಿದ್ದು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ರಂಗನಾಥಸ್ವಾಮಿ ದೇಗುಲ ಬಂದ್ ಆಗಿರಲಿದೆ. ಸೂರ್ಯ ಗ್ರಹಣ ಮುಗಿದ ಬಳಿಕ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ.
ಚಾಮುಂಡಿ ದೇವಿ ದರ್ಶನಕ್ಕೆ ಬ್ರೇಕ್
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ನಾಳೆ ಬೆಳಗ್ಗೆ ದರ್ಶನಕ್ಕೆ ಅವಕಾಶವಿದ್ದು ಮಧ್ಯಾಹ್ನ 1ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಬಂದ್ ಆಗಲಿದೆ. ಸೂರ್ಯ ಗ್ರಹಣದ ಸಮಯದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ವೇಳೆ ಭಕ್ತರಿಗೆ ದರ್ಶನ ಇರುವುದಿಲ್ಲ ಎಂದು ಚಾಮುಂಡೇಶ್ವರಿ ದೇವಸ್ಥಾನ ಮಂಡಳಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನಾಳೆ ಹಾಸನಾಂಬೆ ದರ್ಶನ ನಿಷೇಧ, ಇಂದು, ಬುಧವಾರ ಮಾತ್ರ ಅವಕಾಶ
ಇಂದು ಹಾಸನಾಂಬೆ ದರ್ಶನೋತ್ಸವದ ಹನ್ನೊಂದನೇ ದಿನವಾಗಿದ್ದು ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಇಂದು ರಜೆ ದಿನವಾದ್ದರಿಂದ ಬೆಳಗ್ಗೆಯಿಂದಲೆ ಸಾವಿರಾರು ಭಕ್ತರ ಆಗಮಿಸುತ್ತಿದ್ದಾರೆ. ಆದ್ರೆ ನಾಳೆ ಸೂರ್ಯ ಗ್ರಹಣ ಹಿನ್ನಲೆ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಮತ್ತು ಬುಧವಾರ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ.
ಬಾಗಲಕೋಟೆ ಬನಶಂಕರಿ ದೇವಸ್ಥಾನದ ಪೂಜಾ ಪದ್ದತಿಯಲ್ಲಿ ಬದಲಾವಣೆ
ಇನ್ನು ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನದ ಪೂಜಾ ಪದ್ದತಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ ಮೂರು ಗಂಟೆಗೆ ಅಲಂಕಾರ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ಏಕದಶವಾರ ರುದ್ರಾಭಿಷೇಕ ಮಹಾಮಂಗಳಾರತಿ, ನೈವೇದ್ಯ ಇಡಲಾಗುತ್ತೆ. ನಾಳೆ ಸಂಜೆ 4 ಗಂಟೆವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು ನಾಳೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಸಂಜೆ 4.46ಕ್ಕೆ ಸೂರ್ಯಗ್ರಹಣ ಆರಂಭವಾಗಿ 6.28ಕ್ಕೆ ಗ್ರಹಣಮೋಕ್ಷ ಕಾಲ ಅಂತ್ಯವಾಗುತ್ತೆ. ಗ್ರಹಣ ಅವಧಿಯಲ್ಲಿ ಬನಶಂಕರಿ ತಾಯಿಗೆ ಜಲಾಭಿಷೇಕ ಮಾತ್ರ ಮಾಡಲಾಗುತ್ತಿದ್ದು ಗ್ರಹಣ ಮೋಕ್ಷ ನಂತರ ದೇವಿಗೆ ಷೋಡಶೋಪಚಾರ ಮಹಾಮಂಗಳಾರತಿ ಮಾಡಲಾಗುತ್ತೆ.
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಬಂದ್
ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ನಾಳೆ ಭಕ್ತರಿಗೆ ದೇವಿ ದರ್ಶನ ಇರುವುದಿಲ್ಲ ಎಂದು ದೇವಸ್ಥಾನದ ಧರ್ಮಾಧಿಕಾರಿ ರಾಮಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ ನಾಳೆ ಬಂದ್ ಆಗಿರಲಿದೆ. ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಗ್ಗೆ 6.30ರವರೆಗೂ ಭಕ್ತರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದೆ ಎಂದು ಶ್ರೀಮಹಾಲಕ್ಷ್ಮೀ ದೇವಾಲಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ದೇವರ ದರ್ಶನಕ್ಕೆ ಅವಕಾಶ ನೀಡಿರುವ ದೇವಾಲಯಗಳು
27 ವರ್ಷಗಳ ಬಳಿಕ ಖೇತು ಗ್ರಹ ಸೂರ್ಯಗ್ರಹಣದ ನಡುವೆಯೂ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಐತಿಹಾಸಿಕ ದೇವಸ್ಥಾನ ಗೋಕರ್ಣದಲ್ಲಿ ನಾಳೆ ಭಕ್ತರಿಗೆ ಆತ್ಮಲಿಂಗ ಸ್ಪರ್ಶಕ್ಕೆ ವಿಶೇಷ ಅವಕಾಶ ನೀಡಲಾಗಿದೆ. ಗ್ರಹಣ ಕಾಲದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆತ್ಮ ಲಿಂಗ ಸ್ಪರ್ಶಕ್ಕೆ ಭಕ್ತರು ಆಗಮಿಸಬಹುದು. ಗ್ರಹಣದ ಮಧ್ಯ ಕಾಲದಿಂದ ಮುಕ್ತಾಯದ ವರಗೆ ಭಕ್ತರಿಗೆ ವಿಶೇಷ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ಹೊರಡಿಸಿದೆ.
ಬೆಳಿಗ್ಗೆ 6:30 ರಿಂದ 9:30ರ ವರಗೆ ಭಕ್ತರಿಗೆ ಅವಕಾಶ ನೀಡಲಾಗಿದ್ದು ನಂತರ 9:30 ರಿಂದ ಮಧ್ಯಾಹ್ನ 4 ಗಂಟೆವರಗೆ ದರ್ಶಕ್ಕೆ ಭಕ್ತರಿಗೆ ನಿರ್ಭಂದ ಹೇರಲಾಗಿದೆ. ಗ್ರಹಣದ ಮಧ್ಯಕಾಲ ಅಂದರೆ ಮಧ್ಯಾಹ್ನ 4 ರಿಂದ ಸಂಜೆ 6ರ ವರಗೆ ಆತ್ಮಲಿಂಗ ದರ್ಶನ ಮತ್ತು ಸ್ಪರ್ಶಕ್ಕೆ ಭಕ್ತರಿಗೆ ವಿಶೇಷ ಅವಕಾಶ ಇರುತ್ತದೆ. ಆದ್ರೆ ನಾಳೆ ಮಧ್ಯಾಹ್ನ ಅಮೃತಾನ್ನ ಪ್ರಸಾದ ಮತ್ತು ರಾತ್ರಿ ಪ್ರಸಾದ ಬೋಜನ ಇರುವುದಿಲ್ಲ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಎಂದಿನಂತೆ ದರ್ಶನಾವಕಾಶ
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಎಂದಿನಂತೆ ದರ್ಶನಾವಕಾಶ ಇರಲಿದೆ. ಜೊತೆಗೆ ಎಂದಿನಂತೆ ಪ್ರಸಾದ ವ್ಯವಸ್ಥೆಯು ಇರಲಿದೆ. ಸೂರ್ಯ ಗ್ರಹಣಕ್ಕೆ ಯಾವುದೇ ಬದಲಾವಣೆ ಇರುವುದಿಲ್ಲ.
ಉಡುಪಿ ಕೃಷ್ಣಮಠ ಎಂದಿನಂತೆ ತೆರೆದಿರುತ್ತದೆ
ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣಮಠ ನಾಳೆ ಕೂಡ ಎಂದಿನಂತೆ ತೆರೆದಿರುತ್ತದೆ. ಭಕ್ತರು ಜಪತಪ ದರ್ಶನ ಮಾಡಬಹುದು. ದೇವರ ಮಧ್ಯಾಹ್ನ ಪೂಜೆ ನಂತರ ದರ್ಬೆ ಇಡಲಾಗುತ್ತೆ. ಗ್ರಹಣ ಮೋಕ್ಷ ಕಾಲದಲ್ಲಿ ದರ್ಬೆ ತೆಗೆದು ಪೂಜೆ ಮಾಡಲಾಗುತ್ತೆ. ಭಕ್ತರಿಗೆ ಊಟ ವ್ಯವಸ್ಥೆ ಇರುವುದಿಲ್ಲ.
ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತಡೆ ಇಲ್ಲ. ಗ್ರಹಣ ಕಾಲದಲ್ಲಿ ಮೂಕಾಂಬಿಕಾ ದೇವಿಗೆ ಅಭಿಷೇಕ ನಡೆಯುತ್ತದೆ, ಭಕ್ತರಿಗೆ ಮಧ್ಯಾಹ್ನ ಊಟ ವ್ಯವಸ್ಥೆ ಇರುವುದಿಲ್ಲ. ಇನ್ನು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ 3 ಗಂಟೆಯವರೆಗೆ ತೆರೆದಿರುತ್ತದೆ. ನಂತರ ಬಾಗಿಲು ಮುಚ್ಚಲಾಗುತ್ತದೆ. ಆದ್ರೆ ಹೊರ ಆವರಣದಲ್ಲಿ ಜಪತಪಕ್ಕೆ ಅವಕಾಶ ಇದೆ. ಉಚ್ಚಿಲ ಕ್ಷೇತ್ರದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆ ಇಲ್ಲ. ಗ್ರಹಣ ಕಾಲದಲ್ಲೇ ಸೂರ್ಯಾಸ್ತ ಆಗುವುದರಿಂದ ರಾತ್ರಿ ಪೂಜೆ ಇಲ್ಲ.
Published On - 12:56 pm, Mon, 24 October 22