ಬೆಂಗಳೂರು: ಸಂಕ್ರಾಂತಿ ಮತ್ತು ವೈಕುಂಠ ಏಕಾದಶಿಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಕಠಿಣ ನಿಯಮಗಳನ್ನು ಸೂಚಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಮಾರ್ಗಸೂಚಿ ಹೊರಡಿಸಲಾಗಿದೆ. ಅದರಂತೆ, ದೇವಾಲಯದ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯ ನಡೆಸಲು ಅವಕಾಶ ನೀಡಲಾಗಿದೆ.
ವೈಕುಂಠ ಏಕಾದಶಿ ದಿನದಂದು ಎರಡೂ ಡೋಸ್ ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಮೆರವಣಿಗೆ, ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಜಿಲ್ಲೆಗಳಲ್ಲಿ ಡಿಸಿಗಳು ಪರಿಸ್ಥಿತಿ ಅವಲೋಕಿಸಿ ಇನ್ನೂ ಹೆಚ್ಚಿನ ನಿರ್ಬಂಧ ವಿಧಿಸಬಹುದು ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಜನವರಿ 31ರ ವರೆಗೆ ಕೊವಿಡ್ ಮಾರ್ಗಸೂಚಿ ವಿಸ್ತರಣೆ ಮಾಡಲಾಗಿದೆ. ಸರ್ಕಾರ ಈ ಮೊದಲು ವಿಧಿಸಿದ್ದ ಕೊರೊನಾ ಮಾರ್ಗಸೂಚಿ ವಿಸ್ತರಣೆ ಮಾಡಿ ಆದೇಶ ನೀಡಿದೆ. ಜನವರಿ 31ರ ವರೆಗೂ ಪ್ರತಿಭಟನೆಗಳು, ಮೆರವಣಿಗೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶಾಲೆಗಳಿಗೆ ರಜೆ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಹೊಣೆ ನೀಡಲಾಗಿದೆ.
ಹೊರಾಂಗಣ ಮದುವೆಗಳಿಗೆ 200 ಜನರಿಗಷ್ಟೇ ಅವಕಾಶ, ಒಳಾಂಗಣ ಮದುವೆಗಳಿಗೆ 100 ಜನರಿಗಷ್ಟೇ ಅವಕಾಶ ಎಂದು ಸೂಚನೆ ನೀಡಲಾಗಿದೆ. ಕಂಟೇನ್ಮೆಂಟ್ ಜೋನ್ಗಳ ಬಗ್ಗೆ ಜಿಲ್ಲಾಧಿಕಾರಿಗಳೇ ನಿರ್ಧಾರ ಮಾಡಲಿದ್ದಾರೆ. ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ.
ಖಾಸಗಿ ಕೊವಿಡ್ ಕೇರ್ ಸೆಂಟರ್‌ಗೆ ದರ ನಿಗದಿ
ಖಾಸಗಿ ವೈದ್ಯಕೀಯ ಸಂಸ್ಥೆಗಳಿಂದ ಸಿಸಿಸಿ ನಿರ್ವಹಣೆ ವಿಚಾರವಾಗಿ ಹೋಟೆಲ್‌ಗಳಲ್ಲಿನ ಕೊವಿಡ್ ಕೇರ್ ಸೆಂಟರ್‌ಗೆ ದರ ನಿಗದಿ ಮಾಡಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳಿಂದ ಕೊವಿಡ್ ಕೇರ್ ಸೆಂಟರ್ ನಿರ್ವಹಣೆಗೆ ದರ ನಿಗದಿಪಡಿಸಲಾಗಿದೆ. ಬಜೆಟ್ ಹೋಟೆಲ್ ಒಂದು ದಿನಕ್ಕೆ 4 ಸಾವಿರ ರೂಪಾಯಿ, ತ್ರಿ ಸ್ಟಾರ್ ಹೋಟೆಲ್ ಒಂದು ದಿನಕ್ಕೆ 8 ಸಾವಿರ ರೂಪಾಯಿ, ಫೈವ್ ಸ್ಟಾರ್ ಹೋಟೆಲ್ ಒಂದು ದಿನಕ್ಕೆ 10 ಸಾವಿರ ರೂಪಾಯಿ ದರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊವಿಡ್ ಮಾರ್ಗಸೂಚಿ ವಿಸ್ತರಣೆ ಮಾಡಿ ಆದೇಶ; ಜನವರಿ ಅಂತ್ಯದವರೆಗೆ ಕಠಿಣ ನಿಯಮ
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 14,473 ಜನರಿಗೆ ಕೊರೊನಾ ದೃಢ; 5 ಮಂದಿ ಸಾವು