ಇಂಡ್ಲವಾಡಿಯಲ್ಲಿ ರವಿ ಶಂಕರ ಗುರುದೇವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ

ಬೆಂಗಳೂರಿನ ಆನೇಕಲ್‌ನ ಇಂಡ್ಲವಾಡಿಯಲ್ಲಿ ರವಿಶಂಕರ್ ಅವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ ನೆರವೇರಿದ್ದು, ನೂರಾರು ಯುವಕರ ಸಹಿತ ಸಾವಿರಾರು ಜನರು ಧ್ಯಾನ, ಭಕ್ತಿ ಮತ್ತು ಆಧ್ಯಾತ್ಮಿಕತೆಯಲ್ಲಿ ಭಾಗವಹಿಸಿದ್ದರು. ಧ್ಯಾನವು ಮಾನವನಲ್ಲಿ ಹೇಗೆ ಪರಿವರ್ತನೆ ತರಬಲ್ಲದು ಎಂಬುದನ್ನು ಗುರುದೇವರು ವಿವರಿಸಿದ್ದರು. ಯೋಗ ಮತ್ತು ಸತ್ಸಂಗವು ಮಾನಸಿಕ ಆರೋಗ್ಯ ಹಾಗೂ ಸಮುದಾಯ ಬಲವರ್ಧನೆಗೆ ಹೇಗೆ ನೆರವಾಗುತ್ತದೆ ಎಂದು ಡಾ. ಎಚ್.ಆರ್. ನಾಗೇಂದ್ರ ತಿಳಿಸಿದರು. ಇದು ಗ್ರಾಮೀಣ ಸಮುದಾಯಗಳಿಗೆ ಮೌಲ್ಯಾಧಾರಿತ ಜೀವನಕ್ಕೆ ಪ್ರೇರಣೆಯಾಗಿದೆ.

ಇಂಡ್ಲವಾಡಿಯಲ್ಲಿ ರವಿ ಶಂಕರ ಗುರುದೇವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ
ಇಂಡ್ಲವಾಡಿಯಲ್ಲಿ ಪರಮಪೂಜ್ಯ ಗುರುದೇವ್ ಶ್ರೀ ಶ್ರೀ ರವಿ ಶಂಕರರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ

Updated on: Nov 26, 2025 | 12:32 PM

ಬೆಂಗಳೂರು, ನವೆಂಬರ್‌ 26: ಬೆಂಗಳೂರಿನ (Bengaluru) ಆನೇಕಲ್​ನ ಇಂಡ್ಲವಾಡಿಯಲ್ಲಿ ಮಂಗಳವಾರ  ಗುರುದೇವ ರವಿ ಶಂಕರರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ ನೆರವೇರಿದ್ದು,ಈ ವೇಳೆ ಧ್ಯಾನವು ಹೇಗೆ ಮಾನವನಲ್ಲಿ ಪರಿವರ್ತನೆಯನ್ನು ಉಂಟುಮಾಡಬಲ್ಲದು ಎಂಬುದನ್ನು ವಿವರಿಸಿದ್ದಾರೆ. ಸತ್ಸಂಗದಲ್ಲಿ ನೂರಾರು ಯುವಕರು ಉತ್ಸಾಹದಿಂದ ಭಾಗವಹಿಸಿದ್ದು ಯುವಪೀಳಿಗೆಯೂ ಧ್ಯಾನ, ಸತ್ಸಂಗ ಮತ್ತು ಆಧ್ಯಾತ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದು ಕಂಡು ಬಂತು.

ಸತ್ಸಂಗದಲ್ಲಿ ಭಕ್ತಿ, ಧ್ಯಾನ, ಭಜನೆಯಲ್ಲಿ ತಲ್ಲೀನರಾದ ಜನರು

ಇಂಡ್ಲವಾಡಿ ಗ್ರಾಮದ ಪ್ರಿನ್ಸ್‌ ಅಕಾಡೆಮಿಯಲ್ಲಿ ನಡೆದ ಮಹಾಸತ್ಸಂಗದಲ್ಲಿ ಆಸುಪಾಸಿನ ಮೂವತ್ತಕ್ಕೂ ಹೆಚ್ಚಿನ ಹಳ್ಳಿಗಳ ಸಾವಿರಾರು ಜನರು ನೆರೆದಿದ್ದರು. ಗುರುದೇವ ರವಿ ಶಂಕರರ ಸಮ್ಮುಖದಲ್ಲಿ ನಡೆದ ಸುಂದರ ಸಂಜೆಯ ಸತ್ಸಂಗದಲ್ಲಿ ಜನರು ಭಕ್ತಿ, ಧ್ಯಾನ, ಭಜನೆಗಳ ಮೂಲಕ ತಲ್ಲೀನರಾಗಿ ಸಂಭ್ರಮಿಸಿದರು. ಗುರುದೇವರು ಕಳೆದ ಹಲವಾರು ದಶಕಗಳಿಂದ ತಳಮಟ್ಟದ ಜನಸಮುದಾಯಗಳನ್ನು ಸಂಪರ್ಕಿಸುವ ಸಲುವಾಗಿ ದೇಶದ ಮೂಲೆಮೂಲೆಗಳನ್ನು ತಲುಪಿದ್ದಾರೆ.

ದೇಶದಾದ್ಯಂತ ಸೇವಾ ಉಪಕ್ರಮಗಳನ್ನು ಪ್ರಾರಂಭಿಸುವ ಮೂಲಕ ಹಾಗೂ ರೈತರು, ಯುವಕರು, ಜನಸಾಮಾನ್ಯರು ಮತ್ತು ಸ್ಥಳೀಯ ಮುಖಂಡರೊಡನೆ ನಿರಂತರವಾಗಿ ಸಂವಾದ ಮಾಡುವ ಮೂಲಕ ಸ್ಥೈರ್ಯ ತುಂಬುತ್ತಿದ್ದಾರೆ. ಇದರ ಮುಂದುವರಿಕೆಯಾಗಿ ಇಂಡ್ಲವಾಡಿಯ ಸತ್ಸಂಗ ನಡೆದಿದೆ.ಗುರುದೇವರು ಗ್ರಾಮ ದೇವತೆಗಳಾದ ಶ್ರೀ ಮಾರಮ್ಮ ಹಾಗೂ ಶ್ರೀ ಮಾರಿಯಮ್ಮ ದೇವಾಲಯಗಳಿಗೆ ಭೇಟಿ ನೀಡಿದ ಬಳಿಕ, 108 ಪೂರ್ಣಕುಂಭಗಳೊಂದಿಗೆ ಅವರನ್ನು ಮಹಾಸತ್ಸಂಗಕ್ಕೆ ಸ್ವಾಗತಿಸಲಾಯಿತು.

ಗುರುದೇವರಿಗೆ ಸನ್ಮಾನ

ಎಸ್- ವ್ಯಾಸ (S-VYASA) ಯೋಗ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ. ಎಚ್. ಆರ್. ನಾಗೇಂದ್ರ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಮಾತನಾಡಿ, ಇಂದು ಅನೇಕ ರೀತಿಯ ದೈಹಿಕ ಖಾಯಿಲೆಗಳೊಡನೆ ಮಾನಸಿಕ ಖಾಯಿಲೆಯೂ ಹೆಚ್ಚುತ್ತಿದೆ. ಇದಕ್ಕೆ ಯೋಗವೇ ಪರಿಹಾರ. ನಮ್ಮ ಎಲ್ಲಾ ಹಳ್ಳಿಗಳನ್ನೂ ಸ್ವಚ್ಛವಾಗಿ, ಸ್ವಸ್ಥವಾಗಿ ಮಾಡುವ ಶಪಥವನ್ನು ಎಲ್ಲರೂ ಮಾಡಬೇಕು ಎಂದರು. ಗುರುದೇವರು ಸಭೆಯನ್ನುದ್ದೇಶಿಸಿ ಧ್ಯಾನದ ಪರಿವರ್ತನಾತ್ಮಕ ಸ್ವರೂಪದ ಬಗ್ಗೆ ಮಾತನಾಡಿ,ಕೋಪ ನಮ್ಮನ್ನು ಬಲಹೀನರನ್ನಾಗಿಸುತ್ತದೆ. ದೃಢ ಸಂಕಲ್ಪ ಬೆಳೆಸಿಕೊಳ್ಳಲು, ಜೀವನದ ಮೌಲ್ಯಗಳು ಆಧಾರವಾಗಿರಬೇಕು. ಅದಕ್ಕೆ ಯೋಗ, ಧ್ಯಾನ ಮಾಡಬೇಕು ಎಂದರು.

ಮಾರಮ್ಮ, ಚೌಡೇಶ್ವರಿ ಮತ್ತು ಗಂಗಮ್ಮ ದೇವಾಲಯಗಳ ಹಿನ್ನೆಲೆಯಲ್ಲಿ ನಡೆದ ಸತ್ಸಂಗದಲ್ಲಿ ಭಕ್ತಿಗೀತೆಗಳ ಗಾಯನದ ನಡುವೆ ಗುರುದೇವರ ಮಾರ್ಗದರ್ಶನದಲ್ಲಿ ಮೌನವಾಗಿ ಧ್ಯಾನ ಮಾಡುವ ಮೂಲಕ ಜನರು ಶಾಂತಿ, ಸಂತೋಷ ಮತ್ತು ಸಂಭ್ರಮವನ್ನು ಅನುಭವಿಸಿದರು. ಸತ್ಸಂಗದಲ್ಲಿ ಮಾತನಾಡುತ್ತ ಗುರುದೇವರು ಧ್ಯಾನವು ಹೇಗೆ ಪರಿವರ್ತನೆಯನ್ನು ಉಂಟುಮಾಡಬಲ್ಲದು ಎಂಬುದನ್ನು ವಿವರಿಸಿದರು.ಈ ಸಂದರ್ಭದಲ್ಲಿ ಕಲ್ಲಬಾಳು ಮತ್ತು ಇಂಡ್ಲವಾಡಿ ಪಂಚಾಯತ್‌ಗಳ ನಾಯಕರು ಗುರುದೇವರನ್ನು ಸನ್ಮಾನಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಸನ್ನರವರು, ಗ್ರಾಮ ಸಮುದಾಯಗಳನ್ನು ಬಲಪಡಿಸುವಲ್ಲಿ ಮತ್ತು ಯುವಕರಿಗೆ ಮೌಲ್ಯಾಧಾರಿತ ಜೀವನಕ್ಕೆ ಮಾರ್ಗದರ್ಶನ ಮಾಡುವಲ್ಲಿ ಗುರುದೇವರ ನಿರಂತರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸತ್ಸಂಗದಲ್ಲಿ ನೂರಾರು ಯುವಕರು ಭಾಗಿ

ಈ ಸತ್ಸಂಗವನ್ನು ಯಶಸ್ವಿಯಾಗಿಸಲು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ 200ಕ್ಕೂ ಹೆಚ್ಚು ಸ್ವಯಂಸೇವಕರು ಹಲವಾರು ವಾರಗಳಿಂದ ಶ್ರಮಿಸಿದ್ದು, ಲಲಿತಾಸಹಸ್ರನಾಮ ಪಠಣ ಮುಂತಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಸುಮಾರು 400ಕ್ಕೂ ಹೆಚ್ಚು ಸ್ಥಳೀಯ ಸತ್ಸಂಗಗಳ ಮೂಲಕ 6000ಕ್ಕೂ ಹೆಚ್ಚು ಗ್ರಾಮೀಣ ಜನರು ಭಾಗವಹಿಸಿದ್ದಾರೆ. ಸಾವಿರಾರು ಜನರು ಸೇರುವ ಸತ್ಸಂಗದ ಸುಗಮ ನಿರ್ವಹಣೆಗಾಗಿ ಹಗಲಿರುಳೂ ಶ್ರಮಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಮಹಾಸತ್ಸಂಗವು ಯಶಸ್ವಿಯಾಗಿ ನಡೆಯಿತು.

ಸತ್ಸಂಗದಲ್ಲಿ ನೂರಾರು ಯುವಕರು ಉತ್ಸಾಹದಿಂದ ಭಾಗವಹಿಸಿದ್ದು ಯುವಪೀಳಿಗೆಯೂ ಧ್ಯಾನ, ಸತ್ಸಂಗ ಮತ್ತು ಆಧ್ಯಾತ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದರ ಸೂಚಕವಾಗಿತ್ತು. ಇಂಡ್ಲವಾಡಿಯಲ್ಲಿ ನಡೆದ ಈ ಸತ್ಸಂಗದಲ್ಲಿ ಮೂವತ್ತಕ್ಕೂ ಹೆಚ್ಚು ಹಳ್ಳಿಗಳ ಜನರು ಭಾಗವಹಿಸಿದ್ದು ಇದು ಜಿಗಣಿ-ಆನೇಕಲ್‌ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಆಧ್ಯಾತ್ಮಿಕ ಸಭೆಯಾಗಿದ್ದು, ಈ ಸತ್ಸಂಗದ ಮೂಲಕ ಜನರಿಗೆ ಒತ್ತಡವನ್ನು ನಿವಾರಿಸಿಕೊಂಡು ಸಮುದಾಯದ ಮೌಲ್ಯಗಳನ್ನು ಗೌರವಿಸುವ ಅವಕಾಶ ದೊರೆಯಿತು. ಜೊತೆಗೆ ನಾವೆಲ್ಲರೂ ಒಂದೇ ಎಂಬ ಮೌಲ್ಯವೂ ಅರಿವಾಗಿದೆ ಎಂದು ಕಂಡು ಬಂತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 12:30 pm, Wed, 26 November 25