
ಬೆಂಗಳೂರು, ಜನವರಿ 05: 2025-26ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಮೊದಲ ಹಂತದ ಪೂರ್ವ ತಯಾರಿ ಪರೀಕ್ಷೆ ಆರಂಭಗೊಳ್ಳಲಿದೆ. ಮುಖ್ಯ ಪರೀಕ್ಷೆಗೂ ಮುನ್ನ 3 ಹಂತದಲ್ಲಿ ಪ್ರಿಪರೇಟರಿ ಪರೀಕ್ಷೆ ನಡೆಯಲಿದ್ದು, ಫೆಬ್ರುವರಿಯಲ್ಲಿ ಕೊನೆಯ ಹಂತದ ಪರೀಕ್ಷೆ ಮುಕ್ತಾಯಗೊಳ್ಳಲಿದೆ.
ಪೂರ್ವ ಸಿದ್ಧತಾ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಈಗಾಗಲೇ ವೇಳಾಪಟ್ಟಿಗಳನ್ನು ಪ್ರಕಟಿಸಿದೆ. ಈ ಪರೀಕ್ಷೆಯು ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದಿಕ್ಸೂಚಿಯಾಗಿರಲಿದೆ ಎಂದು ಹೇಳಲಾಗಿದೆ. ಮೊದಲ ಹಂತದ ಪರೀಕ್ಷೆಯು ಇಂದಿನಿಂದ (ಜನವರಿ 5) ಆರಂಭವಾಗಿ, ಜನವರಿ 10ಕ್ಕೆ ಮುಕ್ತಾಯವಾದರೆ, ಎರಡನೇ ಹಂತದ ಪರೀಕ್ಷೆ ಜನವರಿ 27ರಿಂದ ಆರಂಭವಾಗಿ ಫೆಬ್ರುವರಿ 2ಕ್ಕೆ ಮುಗಿಯಲಿದೆ. ಕೊನೆಯ ಹಂತದ ಪರೀಕ್ಷೆ ಫೆಬ್ರುವರಿ 23ರಂದು ಆರಂಭವಾಗಲಿದ್ದು, ಅದೇ ತಿಂಗಳ 28ಕ್ಕೆ ಕೊನೆಗೊಳ್ಳಲಿದೆ.
ವೇಳಾಪಟ್ಟಿಯನ್ನು ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದ್ದು, ಪರೀಕ್ಷೆ ಕುರಿತ ಮಾಹಿತಿಯು ಎಲ್ಲ ವಿದ್ಯಾರ್ಥಿಗಳಿಗೆ ತಲುಪಲು ಕ್ರಮವಹಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.
ವೇಳಾಪಟ್ಟಿಯ ಅನುಸಾರ ಆಯಾ ದಿನದ ಪ್ರಶ್ನೆಪತ್ರಿಕೆಗಳನ್ನು ಮುಖ್ಯಶಿಕ್ಷಕರ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುವುದು. ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿ, ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ. ಮುಖ್ಯ ಪರೀಕ್ಷೆಯಂತೆಯೇ ಸಿದ್ಧತಾ ಪರೀಕ್ಷೆಯೂ ಪಾರದರ್ಶಕವಾಗಿ ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವ ಹೊಣೆ ಜಿಲ್ಲಾ ಉಪನಿರ್ದೇಶಕರದ್ದಾಗಿದ್ದಾಗಿದೆ ಎನ್ನಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಮತ್ತಿತರ ಪ್ರಕರಣಗಳು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಪರೀಕ್ಷೆ ಮುಕ್ತಾಯವಾದ ಮರುದಿನವೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟವಾಗಲಿದೆ. ಮುಖ್ಯ ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:25 am, Mon, 5 January 26