ಬೆಂಗಳೂರು, ಜನವರಿ 3: ಬೆಂಗಳೂರಿನ ಪ್ರತಿಷ್ಠಿತ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಯುನಿವರ್ಸಲ್ ಫಸ್ಟ್ ಏಜ್ ಮಕ್ಕಳ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು (Chess Tournament) ಜನವರಿ 7 ರಂದು ಆಯೋಜಿಸಿದೆ. ಸುಮಾರು 400 ಉದಯೋನ್ಮುಖ ಚೆಸ್ ಆಟಗಾರರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವಿವಿಧ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ತರಬೇತಿ ನೀಡುತ್ತಿರುವ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಆಯೋಜಿಸುತ್ತಿರುವ ಈ ಚೆಸ್ ಪಂದ್ಯಾವಳಿ 7ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. ಪಂದ್ಯಾವಳಿಯ ಒಟ್ಟು ಸುತ್ತುಗಳ ಸಂಖ್ಯೆ ಮತ್ತು ಸುತ್ತಿನ ವೇಳಾಪಟ್ಟಿಯನ್ನು ಅದೇ ದಿನ ಪ್ರಕಟಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಈ ಪಂದ್ಯಾವಳಿಯು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಉಪಕ್ರಮದ ಭಾಗವಾಗಿ ನಡೆಯಲಿದೆ. ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಕೆಎಸ್ಸಿಎ ಮತ್ತು ಬಿಯುಡಿಸಿಎ ಸಹಯೋಗದೊಂದಿಗೆ ಕಾಲೇಜಿನ ಗುರುರಾಯನಪುರ, ಕೋಳೂರು, ರಾಮೋಹಳ್ಳಿ ಕ್ಯಾಂಪಸ್ನಲ್ಲಿ ಪಂದ್ಯಾವಳಿ ಆಯೋಜಿಸಿದೆ ಎಂದು ತಿಳಿಸಿದ್ದಾರೆ.
ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು 120 ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಗುವುದು. ಫಿಡೆಯ ಇತ್ತೀಚಿನ ನಿಯಮಗಳ ಪ್ರಕಾರ ಪಂದ್ಯಾವಳಿ ನಡೆಯಲಿದ್ದು, ಸ್ವಿಸ್ ವ್ಯವಸ್ಥೆಯನ್ನು ಅನುಸರಿಸಲಾಗುವುದು.
7 ವರ್ಷ, 9 ವರ್ಷ, 11 ವರ್ಷ, 13 ವರ್ಷ, 15 ವರ್ಷ ಮತ್ತು 19 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ವಿಭಾಗದಲ್ಲಿ 10 ಟ್ರೋಫಿಗಳನ್ನು ನೀಡಲಾಗುವುದು.
ಶ್ರೀಪಾದ್ ಕೆ.ವಿ. ಅವರು ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿರಲಿದ್ದಾರೆ. ಆಸಕ್ತರು ಜನವರಿ 5, 2024 ರ 6 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬಹುದು. “ಸ್ಥಳದಲ್ಲಿ ನೋಂದಣಿ ಅವಕಾಶವಿಲ್ಲ” ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ಭಾಗವಹಿಸುವ ಎಲ್ಲಾ ಆಟಗಾರರಿಗೆ ಇ – ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಸಮೀಪದ ಚಲ್ಲಘಟ್ಟ ಮೆಟ್ರೊ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ