
ಬೆಂಗಳೂರು, ಅಕ್ಟೋಬರ್ 01: ‘ಶತಮಾನಗಳಿಂದಲೂ ತುಳು ಮತ್ತು ಕನ್ನಡ ಭಾಷೆಗಳ ಸಹಬಾಳ್ವೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು’ ಎಂದು ಬದಲಾಯಿಸುವ ಪ್ರಸ್ತಾಪದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. ಈ ಕುರಿತು ಅವರು ಸಿಎಂ ಡಿಕೆ ಶಿವಕುಮಾರ್ಗೆ ಮನವಿ ಮಾಡಿದ್ದಾರೆ.
ಈ ಕುರಿತಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ದಕ್ಷಿಣ ಕನ್ನಡ ಎನ್ನುವುದು ಕೇವಲ ಒಂದು ಆಡಳಿತಾತ್ಮಕ ಹೆಸರಲ್ಲ. ಅದು ಈ ಭಾಗದ ಶ್ರೀಮಂತ ಐತಿಹಾಸಿಕ ಹಿನ್ನೆಲೆ, ಭಾಷಿಕ ಸಾಮರಸ್ಯ ಹಾಗೂ ಅಖಂಡ ಕರ್ನಾಟಕದೊಂದಿಗಿನ ಅವಿನಾಭಾವ ಸಂಬಂಧವನ್ನು ಬಿಂಬಿಸುವ ವಿಶಿಷ್ಟ ಗುರುತಾಗಿದೆ’ ಎಂದು ಅವರು ಹೇಳಿದ್ದಾರೆ.
‘ತುಳು ಭಾಷೆ ಮತ್ತು ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿರುವ ಈ ಪ್ರದೇಶದಲ್ಲಿ ಕನ್ನಡವೂ ಜನಜೀವನದ ಅವಿಭಾಜ್ಯ ಅಂಗವಾಗಿದೆ ಎಂದಿರುವ’ ಬಿಳಿಮಲೆ, ಈ ಎರಡೂ ಭಾಷೆಗಳ ಸಹಬಾಳ್ವೆ ದಕ್ಷಿಣ ಕನ್ನಡದ ವೈಶಿಷ್ಠವಾಗಿದ್ದು, ಕನ್ನಡದೊಂದಿಗೆ ಭಾವನಾತ್ಮಕ ನಂಟನ್ನು ಹೊಂದಿರುವ ಈ ಜಿಲ್ಲೆಯ ಹೆಸರನ್ನು ಬದಲಾಯಿಸುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ: ಡಿಕೆಶಿ ಮಹತ್ವದ ಘೋಷಣೆ
‘ಹೆಸರಿನ ಬದಲಾವಣೆಯಿಂದ ಈ ಪ್ರದೇಶದ ಕನ್ನಡದೊಂದಿಗಿನ ಮಾನಸಿಕ ಸಂಬಂಧಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ. ರಾಜ್ಯದ ಭಾಷಿಕ ಸಾಮರಸ್ಯದ ದೃಷ್ಠಿಯಿಂದಲೂ ಈ ಕ್ರಮವನ್ನು ಮರುಪರಿಶೀಲಿಸಬೇಕಾದ ಅವಶ್ಯಕತೆಯಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಸೆಪ್ಟೆಂಬರ್ನಲ್ಲಿ ಮಂಗಳೂರಿನಲ್ಲಿ ಚೊಚ್ಚಲ ಸಂಪುಟ ಸಭೆ ಮಾಡಲಾಗಿತ್ತು. ಕರಾವಳಿ ಜಿಲ್ಲೆಗಳಿಗೆ ಬಂಪರ್ ಗಿಫ್ಟ್ ನೀಡಲಾಗಿದೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಮರುನಾಮಕರಣಕ್ಕೆ ಕರಡು ಪ್ರಕಟಿಸಿದೆ. ಜನಾಭಿಪ್ರಾಯ ಸಂಗ್ರಹಿಸಲು 1ತಿಂಗಳು ಕಾಲಾವಕಾಶ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 pm, Thu, 1 October 26