ಬೆಂಗಳೂರು: ನಿವೇಶನಕ್ಕೆ ಸಂಬಂಧಿಸಿದಂತೆ ತನಗೆ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡಿ ಎಂದು ದೂರು ನೀಡಲು ಲೋಕಾಯುಕ್ತ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ದೂರು ನೀಡುವ ಮೊದಲೇ ಕುಸಿದುಬಿದ್ದ ಘಟನೆ ನಗರದ ಲೋಕಾಯುಕ್ತ ಕಚೇರಿಯಲ್ಲಿ ಈಚೆಗೆ ನಡೆದಿದೆ. ಘಟನೆಯು ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ದೂರು ನೀಡಲು ಬಂದಿದ್ದ ವ್ಯಕ್ತಿ ಮೊದಲೇ ವಿಷಸೇವಿಸಿದ್ದ ಎಂಬ ಕಾರಣದಿಂದ ಅವರ ವಿರುದ್ಧವೇ ಆತ್ಮಹತ್ಯೆ ಯತ್ನದ ಆರೋಪದ ಮೇಲೆ ಸಿಬ್ಬಂದಿ ಎಫ್ಐಆರ್ ದಾಖಲಿಸಿದ್ದಾರೆ. ಸೈಟ್ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ದೂರು ನೀಡಲು ಬಂದಿದ್ದ ವ್ಯಕ್ತಿ, ಸಿಬ್ಬಂದಿಗೆ ದೂರಿನ ಪ್ರತಿ ಹಸ್ತಾಂತರಿಸುವ ಮೊದಲೇ ಕುಸಿದುಬಿದ್ದಿದ್ದ. ತಕ್ಷಣ ಅವರನ್ನು ಲೋಕಾಯುಕ್ತ ಸಿಬ್ಬಂದಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಬೌರಿಂಗ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ ಅವರ ಆರೋಗ್ಯ ಸುಧಾರಿಸಿತು. ಪ್ರಸ್ತುತ ಸಾಮಾನ್ಯ ವಾರ್ಡ್ನಲ್ಲಿ ಮಂಜುನಾಥ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಬೆಳಗಾವಿಗೆ ಹೊರಟ ಕರವೇ ಕಾರ್ಯಕರ್ತರು
ಬೆಂಗಳೂರಿನಿಂದ ನೂರಾರು ಸಂಖ್ಯೆಯಲ್ಲಿ ಕನ್ನಡ ರಕ್ಷಣ ವೇದಿಕೆ ಕಾರ್ಯಕರ್ತರು ಬೆಳಗಾವಿಯ ಕಡೆಗೆ ಹೊರಡುತ್ತಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ (ಡಿ.20) ಮಧ್ಯಾಹ್ನ 12 ಗಂಟೆಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕರವೇ ಮುಖಂಡರು ಘೋಷಿಸಿದ್ದಾರೆ.
ಬೆಳಗಾವಿಗೆ ಬಂದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರವೇ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದರು. ಸಚಿವರಾದ ಅಶೋಕ್, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಎಸ್.ಟಿ ಸೋಮಶೇಖರ್ ಜೊತೆ ವಿಮಾನದಲ್ಲಿ ಬೆಳಗಾವಿಗೆ ಬಂದ ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ ಜೊತೆಗೆ ಬೆಳಗಾವಿಗೆ ಖಾಸಗಿ ವಿಮಾನದಲ್ಲಿ ಬಂದರು.
ಜೈಪುರದಲ್ಲಿ ಡ್ರಗ್ಸ್ ಜಪ್ತಿ
ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ₹ 14.65 ಕೋಟಿ ಮೌಲ್ಯದ 2150 ಗ್ರಾಂ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಕೀನ್ಯಾದಿಂದ ಬಂದಿದ್ದ ಮಹಿಳೆ ಅಕ್ರಮವಾಗಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದಳು. ಕೀನ್ಯಾ ಮಹಿಳೆ ವಿರುದ್ಧ ಎನ್‌ಡಿಪಿಎಸ್ ಌಕ್ಟ್‌ನಡಿ ಮೊಕದ್ದಮೆ ಹೂಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯತ್ತ ಸಾವಿರಾರು ಕರವೇ ಕಾರ್ಯಕರ್ತರು: 12 ಗಂಟೆಗೆ ಸುವರ್ಣ ಸೌಧ ಮುತ್ತಿಗೆ
ಇದನ್ನೂ ಓದಿ: ಎಂಇಎಸ್ ನಿಷೇಧಕ್ಕೆ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಆಗ್ರಹ