AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯತ್ತ ಸಾವಿರಾರು ಕರವೇ ಕಾರ್ಯಕರ್ತರು: ನಾಳೆ 12 ಗಂಟೆಗೆ ಸುವರ್ಣ ಸೌಧ ಮುತ್ತಿಗೆ

ಮಧ್ಯಾಹ್ನ 12 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಹಸ್ರಾರು ಕರವೇ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ

ಬೆಳಗಾವಿಯತ್ತ ಸಾವಿರಾರು ಕರವೇ ಕಾರ್ಯಕರ್ತರು: ನಾಳೆ 12 ಗಂಟೆಗೆ ಸುವರ್ಣ ಸೌಧ ಮುತ್ತಿಗೆ
ಕರವೇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮತ್ತು ನಾರಾಯಣಗೌಡ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 19, 2021 | 8:09 PM

Share

ಬೆಂಗಳೂರು: ಸ್ವಾತಂತ್ರ್ಯವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಬೆಳಗಾವಿಗೆ ಧಾವಿಸಲು ಸಿದ್ಧತೆ ನಡೆಸಿದ್ದಾರೆ. ಎಂಇಎಸ್ ಮತ್ತು ಶಿವಸೇನೆಯನ್ನು ಭಯೋತ್ಪಾದಕ ಗುಂಪುಗಳು ಎಂದು ಕರೆದಿರುವ ಕರವೇ, ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ‘ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಕರೆಯನ್ವಯ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಹಸ್ರಾರು ಕರವೇ ಸೇನಾನಿಗಳು ಕಾರು, ಬಸ್ಸು, ರೈಲುಗಳ ಮೂಲಕ ಬೆಳಗಾವಿಯತ್ತ ಧಾವಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಭಾನುವಾರ (ಡಿ.19) ರಾತ್ರಿ 8.30ಕ್ಕೆ ಬೆಂಗಳೂರಿನ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ಸುಮಾರು 50 ವಾಹನಗಳಲ್ಲಿ ಕಾರ್ಯಕರ್ತರು ಹೊರಡಲಿದ್ದಾರೆ. ರಾಜ್ಯ ಸರ್ಕಾರಚು ತಂತ್ರ ನಡೆಸಿ ನಮ್ಮ ಕಾರ್ಯಕರ್ತರನ್ನು ತಡೆಯದೆ ಇದ್ದಲ್ಲಿ ಸೋಮವಾರ (ಡಿ.20) ಬೆಳಿಗ್ಗೆ ಹೊತ್ತಿಗೆ ಹತ್ತು ಸಾವಿರಕ್ಕೂ ಹೆಚ್ಚು ಕರವೇ ಸೇನಾನಿಗಳು ಬೆಳಗಾವಿ ತಲುಪಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಹಸ್ರಾರು ಕರವೇ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಎಲ್ಲ ಭಯೋತ್ಪಾದಕರ ಮೇಲೂ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಬೇಕು. ಎಲ್ಲರನ್ನೂ ಮಹಾರಾಷ್ಟ್ರಕ್ಕೆ ಗಡೀಪಾರು ಮಾಡಬೇಕು. ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ಈ ಕೂಡಲೇ ಕರ್ನಾಟಕದಲ್ಲಿ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಗಡೀಪಾರು ಮಾಡಬೇಕು. ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ ಎಲ್ಲ ಕನ್ನಡಪರ ಕಾರ್ಯಕರ್ತರನ್ನೂ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೋಮಣ್ಣ ಬಾಲಿಶ ಹೇಳಿಕೆ ನಿಲ್ಲಿಸಲಿ: ಪ್ರವೀಣ್ ಕುಮಾರ್ ಶೆಟ್ಟಿ ವಸತಿ ಸಚಿವ ವಿ.ಸೋಮಣ್ಣ ಬಾಲಿಶ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ. ಕನ್ನಡಿಗರ ಮತದಿಂದ ಗೆದ್ದಿರುವ ನೀವು ಹೀಗೆ ಮಾತನಾಡಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಬಗ್ಗೆ ನಮಗೂ ಗೌರವವಿದೆ. ಕರ್ನಾಟಕದಲ್ಲಿ ಎಂಇಎಸ್, ಶಿವಸೇನೆ ಪುಂಡಾಟಿಕೆ ಕೊನೆಗಾಣಬೇಕು. ಎಲ್ಲ ಕನ್ನಡಪರ ಸಂಘಟನೆಗಳು ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಬೇಕು. ನಾಡಿನ ಸ್ವಾಭಿಮಾನದ ಪ್ರಶ್ನೆ ಬಂದಾಗ ಎಲ್ಲರೂ ಸಹಕಾರ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲೆ ಹಾಕುವ ಮೂಲಕ ನಮ್ಮ ಪಾದಯಾತ್ರೆ ಆರಂಭವಾಗುತ್ತದೆ. ರಾಜ್ಯದ ಎಲ್ಲ ಸಂಘಟನೆಗಳು ಒಟ್ಟಿಗೆ ಸಭೆ ಸೇರಿ ನಂತರ ತೀರ್ಮಾನಕ್ಕೆ ಬರುತ್ತೇವೆ. ನಾಡಿನ ಸ್ವಾಭಿಮಾನದ ಪ್ರಶ್ನೆ ನಾವು ಒಗ್ಗಟಿನಿಂದ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಗೆ ಹೋರಾಟಗಾರರು ಹೊರಟರು.

ಇದನ್ನೂ ಓದಿ: ಬೆಳಗಾವಿ ವಿವಾದ: ಉದ್ಧವ್ ಠಾಕ್ರೆ ಹೇಳಿಕೆಗೆ ಎಚ್​ಡಿಕೆ ಖಂಡನೆ, ಎಂಇಎಸ್ ನಿಷೇಧವಿಲ್ಲ ಎಂದ ಸೋಮಣ್ಣ ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ಸರ್ಕಾರಕ್ಕೆ 2 ದಿನ ಗಡುವು ನೀಡಿದ ವಾಟಾಳ್ ನಾಗರಾಜ್

Published On - 8:06 pm, Sun, 19 December 21