ಬೆಂಗಳೂರು: ಇಂದು ರಾಜಭವನದಲ್ಲಿ ನೂತನ ಕರ್ನಾಟಕ ರಾಜ್ಯಪಾಲರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ ಸಂಸದೆ ಸುಮಾಲತಾ ಮತ್ತು ಸಿದ್ದರಾಮಯ್ಯ ಪರಸ್ಪರ ಭೇಟಿ ಮಾಡಿದ್ದಾರೆ. ರಾಜಭವನದಲ್ಲೇ ಸಿದ್ದರಾಮಯ್ಯ ಜೊತೆ ಸುಮಲತಾ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ.
ಏನಮ್ಮಾ ಮಂಡ್ಯ ಗಲಾಟೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುಮಲತಾರಿಗೆ ಕೇಳಿದ್ದಾರೆ. ಈ ವೇಳೆ ಏನಿಲ್ಲಾ ಸರ್, ನಡೀತಾ ಇದೆ ಸರ್ ಎಂದು ಸಂಸದೆ ಸುಮಲತಾ ಉತ್ತರಿಸಿ ನೀವು ಒಮ್ಮೆ ಮಂಡ್ಯಕ್ಕೆ ಬನ್ನಿ ಸರ್ ಎಂದು ಆಹ್ವಾನಿಸಿದ್ದಾರೆ. ಆಯ್ತಮ್ಮ ಆಕಡೆ ಬಂದಾಗ ನೋಡೋಣವೆಂದು ಸಿದ್ದರಾಮಯ್ಯ ಆಹ್ವಾನ ಸ್ವೀಕರಿಸಿದ್ದಾರೆ. ಇದೇ ವೇಳೆಗೆ ಅಷ್ಟರಲ್ಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರಪ್ಪ ಎಂಟ್ರಿ ಕೊಟ್ಟಿದ್ದು ಸಿದ್ದರಾಮಯ್ಯ ಮತ್ತು ಸುಮಲತಾ ಉದ್ದೇಶಿಸಿ ಹಾಸ್ಯ ಚಟಾಕಿ ಹಾರಿಸಿದ್ರು.
ಇನ್ನು ನೂತನ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಖರ್ಗೆ, ಸ್ನೇಹಿತರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಸಚಿವ ಈಶ್ವರಪ್ಪ, ಸಂಸದೆ ಸುಮಲತಾರನ್ನು ಭೇಟಿಯಾಗಿದ್ದೆವು. ರಾಜಕೀಯ ಮಧ್ಯೆ ಬಿಡುವುಮಾಡಿಕೊಂಡು ಮಾತನಾಡಿದೆವು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸುಮಲತಾ ಹೆಸರು ಕೇಳ್ತಿದ್ದಂತೆ ಕೈಮುಗೀತಿದ್ದಾರೆ ಹೆಚ್ಡಿಕೆ
ಕೆಆರ್ಎಸ್ ಡ್ಯಾಂ ಬಿರುಕು ಹೇಳಿಕೆಯಿಂದ ಮಂಡ್ಯ ರಾಜಕೀಯದಲ್ಲಿ ಉಂಟಾಗಿರೋ ಕಂಪನದ ಸದ್ಯದ ಕೇಂದ್ರಬಿಂದು ಅಕ್ರಮ ಗಣಿಗಾರಿಕೆ. ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಸ್ಫೋಟಕ ಹೇಳಿಕೆ ನೀಡಿದ್ದ ಸುಮಲತಾ ಗಣಿಗಾರಿಕೆ ಪ್ರದೇಶಕ್ಕೇ ವಿಸಿಟ್ ಕೊಟ್ಟು ದಳಪತಿಗಳಿಗೆ ಟಕ್ಕರ್ ಕೊಟ್ಟಿದ್ರು. ಆದ್ರೆ ಎರಡೇ ದಿನಕ್ಕೆ ಈ ಸಹವಾಸ ಸಾಕಪ್ಪಾ ಅಂತಿರೋ ಕುಮಾರಸ್ವಾಮಿ, ಸುಮಲತಾ ಬಗ್ಗೆ ಕೇಳಿದ್ರೆ ಕೈಮುಗಿದು ಹೊರಟು ಹೋಗ್ತಿದ್ದಾರೆ.
ಹೆಚ್ಡಿಕೆ ಆಡಿಯೋ ಬಾಂಬ್ಗೆ ಸುಮಲತಾ ಫೋನ್ ಟ್ಯಾಪಿಂಗ್ ಟಾಂಗ್
ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂದಿದ್ದ ಸುಮಲತಾ ವಿರುದ್ಧ ಹೆಚ್ಡಿಕೆ ಆಡಿರೋ ಆ ಮಾತು ಇವತ್ತು ಮಂಡ್ಯ ರಾಜಕಾರಣ ಧಗಧಗಿಸುವಂತೆ ಮಾಡಿದೆ. ಕೆಆರ್‌ಎಸ್ ಡ್ಯಾಂ ಬಾಗಿಲಿಗೆ ಸುಮಲತಾರನ್ನು ಮಲಗಿಸಬೇಕು ಅಂತಾ ಹೇಳ್ತಿದ್ದಂತೆ ಸಿಡಿಮಿಡಿಗೊಂಡ ಸುಮಲತಾ ಗಣಿಗಾರಿಕೆ ಪ್ರದೇಶಕ್ಕೇ ಲಗ್ಗೆ ಇಡೋ ಮೂಲಕ ದಳಪತಿಗಳಿಗೆ ಸೆಡ್ಡು ಹೊಡೆದಿದ್ರು. ಈ ವೇಳೆ ಸುಮಲತಾ ವಿರುದ್ಧ ಆಡಿಯೋ ಅಸ್ತ್ರ ಪ್ರಯೋಗಕ್ಕೆ ಕುಮಾರಸ್ವಾಮಿ ಮುಂದಾಗಿದ್ದರು. ಆದ್ರೆ ಮಾಜಿ ಸಿಎಂ ಆಡಿಯೋ ಬಾಂಬ್ಗೆ ಸುಮಲತಾ ಫೋನ್ ಟ್ಯಾಪಿಂಗ್ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸರ್ಕಾರದಲ್ಲಿ ನನ್ನ ಫೋನ್ ಟ್ಯಾಪ್ ಆಗಿದೆ. ಅಷ್ಟೇ ಅಲ್ಲ ಆದಿಚುಂಚನಗಿರಿ ಶ್ರೀಗಳ ಫೋನ್ ಸಹ ಟ್ಯಾಪ್ ಆಗಿದೆ ಅಂತಾ ಆರೋಪಿಸಿದ್ರು.
ಇತ್ತ ಸುಮಲತಾ ಫೋನ್ ಟ್ಯಾಪಿಂಗ್ ಬಾಂಬ್ ಸಿಡಿಸ್ತಿದ್ದಂತೆ ಕುಮಾರಸ್ವಾಮಿ ಕೂಡಾ ಅಲರ್ಟ್ ಆಗಿದ್ದಾರೆ. ಸುಮಲತಾ ಆರೋಪಕ್ಕೆ ಉತ್ತರಿಸಿರೋ ಕುಮಾರಸ್ವಾಮಿ ನಾನ್ಯಾಕೆ ಟೆಲಿಫೋನ್ ಕದ್ದಾಲಿಕೆ ಮಾಡಲಿ. ಹಾಗೇನಾದ್ರೂ ಟೆಲಿಫೋನ್ ಕದ್ದಾಲಿಕೆ ಮಾಡುತ್ತಿದ್ದರೆ ನನ್ನ ಸರ್ಕಾರ ಉರುಳೋದಿಕ್ಕೆ ಬಿಡುತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ರು.
ಜೆಡಿಎಸ್ ಶಾಸಕರ ಭ್ರಷ್ಟಾಚಾರಕ್ಕೆ ಅವ್ರ ನಾಯಕ ಅಂಬಾಸಿಡರ್
ಮಂಡ್ಯ ಜಿಲ್ಲೆಯಲ್ಲಿರೋ ಕೆಲ ಜೆಡಿಎಸ್ ಶಾಸಕರು ಅಕ್ರಮ ಗಣಿಗಾರಿಕೆ ಜೊತೆಗೆ ಭ್ರಷ್ಟಾಚಾರ ನಡೆಸ್ತಿದ್ದಾರೆ ಅಂತಾ ಸುಮಲತಾ ಮತ್ತೊಂದು ಆರೋಪ ಮಾಡಿದ್ದಾರೆ. ಅಲ್ಲದೆ ಜೆಡಿಎಸ್ ಶಾಸಕರ ನಾಯಕ ಭ್ರಷ್ಟಾಚಾರದ ಅಂಬಾಸಿಡರ್, ಅಂದ್ರೆ ರಾಯಭಾರಿ ಅಂತಾ ಪರೋಕ್ಷವಾಗಿ ಹೆಚ್ಡಿಕೆಗೆ ಕುಟುಕಿದ್ರು. ಇದಕ್ಕೆ ತಿರುಗೇಟು ಕೊಟ್ಟ ಹೆಚ್ಡಿಕೆ ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ಕುಟುಂಬ ಅಂದ್ರು.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ, ಆದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ; ಸಂಸದೆ ಸುಮಲತಾ
Published On - 2:43 pm, Sun, 11 July 21