ಪ್ರತ್ಯೇಕ ಪಕ್ಷ ಕಟ್ತಾರಾ ಸುಮಲತಾ ಅಂಬರೀಷ್?; ಅಭಿಮಾನಿಗಳಿಂದ ಹೆಚ್ಚಾಯ್ತು ಒತ್ತಾಯ
‘ಅಂಬರೀಷ್ ಅವರ ದಾರಿಯಲ್ಲಿ ನಾನು ಹೋಗುತ್ತೇನೆ. ಅವರ ಹೆಸರನ್ನು ನಾನು ಕಾಪಾಡಿಕೊಳ್ತೀನಿ. ನಿಮ್ಮ ಈ ಅಭಿಮಾನವೇ ನನಗೆ ಶಕ್ತಿ. ಯಾರೂ ಕೆಟ್ಟ ದಾರಿಯಲ್ಲಿ ಹೋಗಬೇಡಿ’ ಎಂದು ಸುಮಲತಾ ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ.
ಕೆಆರ್ಎಸ್ ಡ್ಯಾಂನಲ್ಲಿ ನೀರು ಸೋರುತ್ತಿದ್ದರೆ ಸುಮಲತಾ ಅವರನ್ನು ಅಡ್ಡಲಾಗಿ ಮಲುಗಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ಈ ವಿಚಾರ ಸುಮಲತಾ ಅಂಬರೀಷ್ ಹಾಗೂ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹೀಗಾಗಿ, ಅಂಬರೀಷ್ ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇವರನ್ನು ಇಂದು (ಜುಲೈ 11) ಸುಮಲತಾ ಭೇಟಿ ಆಗಿದ್ದಾರೆ. ಈ ವೇಳೆ, ಪ್ರತ್ಯೇಕ ಪಕ್ಷ ಕಟ್ಟುವಂತೆ ಸುಮಲತಾ ಬಳಿ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
‘ನಿಮ್ಮ ಜತೆ ನಾವಿದ್ದೇವೆ, ನಿಮಗೋಸ್ಕರ ಜೀವಕೊಡಲು ಸಿದ್ಧರಿದ್ದೇವೆ. ಯಾವುದಕ್ಕೂ ಹೆದರದೆ ನೀವು ಮುನ್ನುಗ್ಗಿ, ನಾವಿರುತ್ತೇವೆ. ಯಾರೊಬ್ಬರ ಟೀಕೆ, ಆರೋಪಗಳಿಗೆ ನೀವು ಹೆದರಬೇಡಿ. ನೀವು ಯಾವಾಗಲೂ ಮಂಡ್ಯ ಕ್ಷೇತ್ರದ ಸಂಸದರಾಗಿರಬೇಕು. ಈಗ ನೀವು‘ಸ್ವಾಭಿಮಾನಿ ಪಕ್ಷ’ ಘೋಷಿಸಿ. ಮಂಡ್ಯದ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಿಲ್ಲಿಸಿ. ನಾವು ಅವರನ್ನು ಗೆಲ್ಲಿಸುತ್ತೇವೆ’ ಎಂದು ಎಂದು ಅಭಿಮಾನಿಗಳು ಸುಮಲತಾ ಅವರನ್ನು ಒತ್ತಾಯಿಸಿದ್ದಾರೆ. ಪ್ರತಿಭಟನೆ ಕುರಿತಂತೆ ಮಾತನಾಡಿರುವ ಸುಮಲತಾ, ‘ಪ್ರತಿಭಟನೆ ಮಾಡುವವರ ಪರ ನಾನು ನಿಂತಿಲ್ಲ. ಅಂಬರೀಷ್ ಅವರ ಅಭಿಮಾನಿಗಳಿಗೆ ನೋವಾಗಿದೆ. ನನಗೆ ದಿನನಿತ್ಯ ನೂರಾರು ಫೋನ್ಗಳು ಬರುತ್ತಿವೆ. ಅಕ್ರಮ ಏನಾಗ್ತಿದೆ ಅದನ್ನ ನಿಯಂತ್ರಿಸಿ ಎಂದು ನಾನು ಹೇಳುತ್ತಿದ್ದೇನೆ. ಈಗ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ. ಅಕ್ರಮದ ಮಾಹಿತಿ ನಾನು ಕೇಳಿದ್ದೇನೆ, ಈವರೆಗೆ ಕೊಟ್ಟಿಲ್ಲ. ರೈತರ ಪರವಾಗಿ ನಾನು ನಿಲ್ತೀನಿ. ಅವರ ಪರ ಹೋರಾಟ ಮಾಡ್ತೀನಿ’ ಎಂದಿದ್ದಾರೆ ಸುಮಲತಾ.
‘ಅಂಬರೀಷ್ ಅವರ ದಾರಿಯಲ್ಲಿ ನಾನು ಹೋಗುತ್ತೇನೆ. ಅವರ ಹೆಸರನ್ನು ನಾನು ಕಾಪಾಡಿಕೊಳ್ತೀನಿ. ನಿಮ್ಮ ಈ ಅಭಿಮಾನವೇ ನನಗೆ ಶಕ್ತಿ. ಯಾರೂ ಕೆಟ್ಟ ದಾರಿಯಲ್ಲಿ ಹೋಗಬೇಡಿ’ ಎಂದು ಸುಮಲತಾ ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ.
ಕೆಆರ್ಎಸ್ನಲ್ಲಿ ನೀರು ಸೋರುತ್ತಿದೆ ಎಂದು ಸುಮಲತಾ ಹೇಳಿದ್ದರು. ಈ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ, ‘ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ. ಕೆಆರ್ಎಸ್ ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ. ಕೆಆರ್ಎಸ್ ಸೋರುತ್ತಿದ್ದರೆ ಅಲ್ಲಿ ಸುಮಲತಾರನ್ನ ಮಲಗಿಸಬೇಕು’ ಎಂದು ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: ಏನಮ್ಮಾ ಮಂಡ್ಯ ಗಲಾಟೆ ಎಂದ ಸಿದ್ದರಾಮಯ್ಯಗೆ ಹೀಗೆ ನಡೀತಾ ಇದೆ ಎಂದ ಸುಮಲತಾ; ನಡುವೆ ಹಾಸ್ಯ ಚಟಾಕಿ ಹಾರಿಸಿದ ಈಶ್ವರಪ್ಪ
Published On - 3:08 pm, Sun, 11 July 21