ಬೆಂಗಳೂರು ಏರ್​ಪೋರ್ಟ್​ನಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಕಾರಣ ಇಲ್ಲಿದೆ

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಥರ್ಡ್ ಪಾರ್ಟಿ ಸಿಸ್ಟಂ’ ದೋಷದಿಂದ ಚೆಕ್-ಇನ್ ವ್ಯತ್ಯಯ ಉಂಟಾಗಿ ಇಂಡಿಗೋ, ಏರ್ ಇಂಡಿಯಾ ಸೇರಿದಂತೆ ಹಲವು ಏರ್‌ಲೈನ್ಸ್‌ಗಳ 58ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ವ್ಯವಸ್ಥೆ ಪುನಃಸ್ಥಾಪನೆ ನಡೆಯುತ್ತಿದ್ದು, ಪ್ರಯಾಣಿಕರು ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನ ಸ್ಥಿತಿ ಪರಿಶೀಲಿಸಿಕೊಳ್ಳುವಂತೆ ಏರ್​ಲೈನ್ಸ್​​ಗಳು ಮನವಿ ಮಾಡಿವೆ.

ಬೆಂಗಳೂರು ಏರ್​ಪೋರ್ಟ್​ನಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಕಾರಣ ಇಲ್ಲಿದೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

Updated on: Dec 03, 2025 | 7:33 AM

ಬೆಂಗಳೂರು, ಡಿಸೆಂಬರ್ 3: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಮಂಗಳವಾರ ಸಂಚಾರ ಮಾಡಬೇಕಿದ್ದ ಮತ್ತು ಬುಧವಾರ ಹೊರಡಲಿರುವ ಸುಮಾರು 58 ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ ಎಂದು ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಕೈಸ್ಕ್ಯಾನರ್ ತಿಳಿಸಿದೆ. ಈ ಪೈಕಿ, ಮಂಗಳವಾರ ಸುಮಾರು 29 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿವೆ. ಅದರಲ್ಲೂ ಇಂಡಿಗೋ ಏರ್​ಲೈನ್ಸ್​ನ ಹೆಚ್ಚಿನ ವಿಮಾನಗಳು ವಿಳಂಬವಾಗಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮೂಲಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಕಾರಣಗಳಿಂದ ಈ ವಿಳಂಬವಾಗಿದೆ. ವಿಮಾನ ನಿಲ್ದಾಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ವಿಮಾನ ಸಂಚಾರ ವಿಳಂಬಕ್ಕೆ ಕಾರಣವೇನು?

ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯನ್ನು ನಿರ್ವಹಿಸುವ ‘ಥರ್ಡ್ ಪಾರ್ಟಿ ಸಿಸ್ಟಂ’ನಲ್ಲಿ ಉಂಟಾದ ಅಡಚಣೆಯಿಂದಾಗಿ ಚೆಕ್-ಇನ್ ಮೇಲೆ ಪರಿಣಾಮವಾಗುತ್ತಿದೆ. ಇದರ ಪರಿಣಾಮವಾಗಿ ಏರ್ ಇಂಡಿಯಾ ಸೇರಿದಂತೆ ಹಲವಾರು ಏರ್​ಲೈನ್ಸ್​​ಗಳ ಕಾರ್ಯಾಚರಣೆಯಲ್ಲಿ ವಿಳಂಬವಾಗುತ್ತಿದೆ.

ಪ್ರಯಾಣಿಕರಿಗೆ ಸುಗಮ ಚೆಕ್-ಇನ್ ಮಾಡಿಕೊಡುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ವ್ಯವಸ್ಥೆಯನ್ನು ಹಂತಹಂತವಾಗಿ ಪುನಃಸ್ಥಾಪಿಸಲಾಗುತ್ತಿದ್ದರೂ, ಪರಿಸ್ಥಿತಿ ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ಬರುವ ವರೆಗೆ ನಮ್ಮ ಕೆಲವು ವಿಮಾನಗಳು ವಿಳಂಬವಾಗಿ ಸಂಚರಿಸಬಹುದು ಎಂದು ಏರ್ ಇಂಡಿಯಾ ಎಕ್ಸ್‌ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾದ 6 ವಿಮಾನಗಳು ಈಗಾಗಲೇ ವಿಳಂಬವಾಗಿ ಸಂಚರಿಸಿವೆ.

ಏರ್ ಇಂಡಿಯಾ ಎಕ್ಸ್ ಸಂದೇಶ


ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಾವು ಪ್ರಯಾಣಿಸಲಿರುವ ವಿಮಾನದ ಸ್ಥಿತಿಗತಿ ಪರಿಶೀಲಿಸಿಕೊಂಡು ಹೊರಡುವಂತೆ ಪ್ರಯಾಣಿಕರಿಗೆ ಏರ್ ಇಂಡಿಯಾ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಹೊಸ ರೂಲ್ಸ್​: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್​​

ಸ್ಟಾರ್ ಏರ್, ಸ್ಪೈಸ್‌ಜೆಟ್,ಅಕಾಸಾ ಏರ್, ಸಿಂಗಾಪುರ್ ಏರ್‌ಲೈನ್ಸ್, ಬಾಟಿಕ್ ಏರ್ ಮಲೇಷ್ಯಾ, ಏರ್ ಫ್ರಾನ್ಸ್, ಲುಫ್ಥಾನ್ಸ, ವರ್ಜಿನ್ ಅಟ್ಲಾಂಟಿಕ್ ಮತ್ತು ಕುವೈತ್ ಏರ್‌ವೇ ಗಳ ಕೆಲ ವಿಮಾನಗಳು ಕೂಡ ವಿಳಂಬವಾಗಿ ಸಂಚರಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ