ಉಬರ್ ಚಾಲಕನಿಂದ ಮಹಿಳೆಗೆ ಕಿರುಕುಳ; ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಕ್ರಮ ಕೈಗೊಂಡ ಕಂಪನಿ
ಮಹಿಳಾ ಗ್ರಾಹಕರ ಜತೆ ಕ್ಯಾಬ್ ಡ್ರೈವರ್ ಅಸಭ್ಯವಾಗಿ ವರ್ತಿಸಿದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಬರ್ ಚಾಲಕನೊಬ್ಬ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದು, ಈ ವಿಚಾರವಾಗಿ ಮಹಿಳೆಯು ಲಿಂಕ್ಡ್‌ಇನ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ಬೆಂಗಳೂರು: ಮಹಿಳಾ ಗ್ರಾಹಕರ ಜತೆ ಕ್ಯಾಬ್ ಡ್ರೈವರ್ (Uber Cab Driver) ಅಸಭ್ಯವಾಗಿ ವರ್ತಿಸಿದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಬರ್ ಚಾಲಕನೊಬ್ಬ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದು, ಈ ವಿಚಾರವಾಗಿ ಮಹಿಳೆಯು ಲಿಂಕ್ಡ್‌ಇನ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಲಿಂಕ್ಡ್‌ಇನ್ (LinkedIn) ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಉಬರ್ ಕಂಪನಿಯು ಚಾಲಕನ ವಿರುದ್ಧ ಕ್ರಮ ಕೈಗೊಂಡಿದೆ. ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಮಹಿಳೆಯು ಬಿಟಿಎಂ 2 ನೇ ಹಂತದಿಂದ ಜೆಪಿ ನಗರ ಮೆಟ್ರೋಗೆ ಕ್ಯಾಬ್ ಸೇವೆ ಪಡೆದಿದ್ದರು. ಚಾಲಕನು ಸಮಯಕ್ಕೆ ಸರಿಯಾಗಿ ಬಂದಿದ್ದಲ್ಲದೆ ಆರಂಭದಲ್ಲಿ ಪ್ರಯಾಣ ಸರಿಯಾಗಿಯೇ ಸಾಗುತ್ತಿತ್ತು ಎಂದು ಮಹಿಳೆ ಬರೆದುಕೊಂಡಿದ್ದಾರೆ.
ಹಠಾತ್ತನೆ ಚಾಲಕ ಮಾರ್ಗ ಬದಲಾಯಿಸಿದ್ದ. ಗೂಗಲ್ ಮ್ಯಾಪ್ ಪರಿಶೀಲಿಸಿದ ಮಹಿಳೆಗೆ ಕ್ಯಾಬ್ ಬೇರೆ ಮಾರ್ಗದಲ್ಲಿ ಸಾಗುತ್ತಿರುವುದರ ಅರಿವಾಯಿತು. ಹೀಗಾಗಿ ನಿಗದಿತ ನಿಲ್ದಾಣದ ವರೆಗೆ ಕಾಯುವ ಮೊದಲೇ, ಅಲ್ಲಿಯೇ ಕ್ಯಾಬ್ನಿಂದ ಇಳಿಯಲು ಮಹಿಳೆ ವಿನಂತಿಸಿದ್ದಾರೆ.
ಕ್ಯಾಬ್ ದರವನ್ನು ಪಾವತಿಸುತ್ತಿದ್ದಂತೆಯೇ ಚಾಲಕ ತನ್ನ ಬಟ್ಟೆ ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ. ಆಘಾತಕ್ಕೊಳಗಾಗಿ ಓಡಿಹೋಗಿ ಜನಸಂದಣಿಯನ್ನು ಸೇರಿಕೊಂಡೆ. ಒಂದು ಕ್ಷಣ ಗೊಂದಲ ಹಾಗೂ ಭೀತಿಯಿಂದ ಏನು ಮಾಡಬೇಕೆಂಬುದು ತೋಚದಾಯಿತು ಎಂದು ಮಹಿಳೆ ಲಿಂಕ್ಡ್‌ಇನ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Uttar Pradesh Crime: ನಿನ್ನ ಲಿಂಗ ಬದಲಿಸುತ್ತೇನೆ ಎಂದು ಹೇಳಿ ಮಹಿಳೆಯ ಪ್ರಾಣವನ್ನೇ ತೆಗೆದ ಮಂತ್ರವಾದಿ
ನಂತರ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಚಾಲಕನ ವಿರುದ್ಧ ಉಬರ್ ಕಂಪನಿಯು ಕ್ರಮ ಕೈಗೊಂಡಿದೆ ಎಂದು ಉಲ್ಲೇಖಿಸಿದ್ದಾರೆ. ಉಬರ್ ಕಂಪನಿಯ ತ್ವರಿತ ಪ್ರತಿಕ್ರಿಯೆಗೆ ಮತ್ತು ಕ್ರಮಕ್ಕೆ ನಾನು ಕೃತಜ್ಞಳಾಗಿದ್ದೇನೆ ಮತ್ತು ಅವರು ಪರಿಸ್ಥಿತಿಯನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ