ಬೆಂಗಳೂರು, ನವೆಂಬರ್ 01: 15 ತಿಂಗಳ ಮಗು ಮೌರ್ಯ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯಗೆ ಮಗುವಿನ ತಂದೆ ಮಲ್ಲಿಕಾರ್ಜುನ್ ಧನ್ಯವಾದ ಸಲ್ಲಿಸಿದ್ದಾರೆ. ಸೂಕ್ತ ಚಿಕಿತ್ಸೆ ಕೊಡಿಸಲು ಸಹಾಯ ಕೋರಿ ಸಿಎಂ ಸಿದ್ದರಾಮಯ್ಯ (Siddaramaiah) ಗೆ ಮಗುವಿನ ತಂದೆ ಮಲ್ಲಿಕಾರ್ಜುನ್ ಈ ಮೊದಲು ಪತ್ರ ಬರೆದಿದ್ದರು. ಇದೀಗ ತಂದೆ ಮಲ್ಲಿಕಾರ್ಜುನ್ ಮನವಿ ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅವರು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಗುವಿನ ತಂದೆ ಮಲ್ಲಿಕಾರ್ಜುನ್, ನಿಮ್ಮ ಆಶೀರ್ವಾದದಿಂದ ಆದಷ್ಟು ಬೇಗ ಲಸಿಕೆ ಸಿಗುವ ವಿಶ್ವಾಸವಿದೆ. ನನ್ನ ಬಗ್ಗೆ ತೋರಿಸದ ಕಾಳಜಿಗೆ, ತಮಗೆ ಮನದಾಳದ ಧನ್ಯವಾದಗಳು. ನಿಮ್ಮ ಆಶೀರ್ವಾದದಿಂದ ನನಗೆ ಬೇಗ ಲಸಿಕೆ ಸಿಗಲಿ ಎಂದು ಪ್ರಾರ್ಥಿಸುವೆ. ಈ ಫಂಡ್ ರೈಸಿಂಗ್ ಲಿಂಕ್ ಅಲ್ಲಿ ಸಹಾಯ ಮಾಡುವಂತೆ ಎಲ್ಲ ಕನ್ನಡಿಗರಲ್ಲಿ ವಿನಂತಿ ಮಾಡಿದ್ದಾರೆ.
ಇದನ್ನೂ ಓದಿ: 15 ತಿಂಗಳ ಪುಟ್ಟ ಮಗುವಿಗಾಗಿ ಮಿಡಿದ ಸಿಎಂ ಹೃದಯ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಮನವಿ
‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಕಾಯಿಲೆಯಿಂದ ಬಳಲುತ್ತಿರುವ ಹದಿನೈದು ತಿಂಗಳ ಹಸುಗೂಸು ಮೌರ್ಯ ಮಗುವಿನ ತಾಯಿ ಹೆಸರು ಮಾಧುರಿ, ತಂದೆ ಹೆಸರು ಮಲ್ಲಿಕಾರ್ಜುನ್. ಮೂಲತಃ ಗದಗ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ವಾಸವಿದ್ದಾರೆ. ಖಾಸಗಿ ಕಂಪನಿಯಲ್ಲಿ ಟೆಕ್ಕಿ ದಂಪತಿಗಳು ಕೆಲಸ ಮಾಡುತ್ತಿದ್ದಾರೆ.
ಸನ್ಮಾನ್ಯ@CMofKarnataka
ರವರೆ, ನನ್ನ ಬಗ್ಗೆ ತೋರಿಸದ ಕಾಳಜಿಗೆ, ತಮಗೆ ಮನದಾಳದ ಧನ್ಯವಾದಗಳು. ನಿಮ್ಮ ಆಶೀರ್ವಾದದಿಂದ ನನಗೆ ಬೇಗ ಲಸಿಕೆ ಸಿಗಲಿ ಎಂದು ಪ್ರಾರ್ಥಿಸುವೆ.🙏 ಈ ಫಂಡ್ ರೈಸಿಂಗ್ ಲಿಂಕ್ ಅಲ್ಲಿ ಸಹಾಯ ಮಾಡುವಂತೆ ಎಲ್ಲ ಕನ್ನಡಿಗರಲ್ಲಿ ವಿನಂತಿDonation link: https://t.co/lucD1rEIvL https://t.co/YPtNEWvj6R
— Baby Maurya Fights SMA (@MauryaFightsSMA) November 1, 2023
ಹುಟ್ಟಿದಾಗ ಎಲ್ಲರಂತೆ ಇದ್ದ ಪುಟಾಣಿ ಕಂದಮ್ಮ ಮೌರ್ಯ, ಅ.14ರಂದು ಮಗುವಿಗೆ ಕಾಯಿಲೆ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಜನಿಸಿದ 2 ವರ್ಷದೊಳಗೆ ಇಂಜೆಕ್ಷನ್ ಕೊಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಸದ್ಯ ಮಗನ ಚಿಕಿತ್ಸೆಗಾಗಿ ದಂಪತಿ ಈವರೆಗೆ 60 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. 8 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದರು.
ಇದನ್ನೂ ಓದಿ: ವಿಜಯಪುರ: ಈರುಳ್ಳಿ ದರ ಏರಿಕೆ; ನಿಜವಾಗಿಯೂ ರೈತರಿಗೆ ಲಾಭ ಸಿಕ್ಕಿದೆಯಾ?
ಸದ್ಯ ಮಗುವಿನ ಚಿಕಿತ್ಸೆ ಸಂಬಂಧ ಪೋಷಕರು ನವದೆಹಲಿಗೆ ತೆರಳಿದ್ದಾರೆ. ಮಗುವಿನ ಕಾಯಿಲೆ ಗುಣಪಡಿಸಲು ಝೋಲ್ಗೆನ್ಸ್ಮ ಚುಚ್ಚುಮದ್ದು ಅಗತ್ಯವಿದೆ. ವಿದೇಶದಿಂದ ಚುಚ್ಚುಮದ್ದು ಆಮದು ಮಾಡಿಕೊಳ್ಳಲು 17.5 ಕೋಟಿ ರೂ. ಅಗತ್ಯವಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ವಿನಂತಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.