ವಿಜಯಪುರ: ಈರುಳ್ಳಿ ದರ ಏರಿಕೆ; ನಿಜವಾಗಿಯೂ ರೈತರಿಗೆ ಲಾಭ ಸಿಕ್ಕಿದೆಯಾ?
ದಿನದಿಂದ ದಿನಕ್ಕೆ ಈರುಳ್ಳಿ ದರ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರಿಗೆ ಬೆಲೆ ಎರಿಕೆ ಬಿಸಿ ತಗುಲುತ್ತಿದೆ. ಈರುಳ್ಳಿ ಬೆಳೆಗಾರರಿಗೆ ಬಂಪರ್ ಬೆಲೆ ಬಂದಿದ್ದು, 10 ಸಾವಿರಕ್ಕೂ ಆಧಿಕ ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ರೈತರಿಗೆ ಮಾತ್ರ ಬಂಪರ್ ಬಂದಿಲ್ಲ. ರೈತನದ್ದು ಎಂದಿನಂತೆ ಎಥಾಸ್ಥಿತಿ. ಯಾಕೆ ಅಂತೀರಾ? ಇಲ್ಲಿದೆ ನೋಡಿ.
ವಿಜಯಪುರ, ನ.01: ಒಂದು ಕೆಜಿ ಈರುಳ್ಳಿ ದರ(Onion Rate) 80 ರಿಂದ 120 ರೂಪಾಯಿ ಇದ್ದು, ಮತ್ತಷ್ಟು ದರ ಏರಿಕೆಯಾಗುತ್ತಿದೆ. ಹೌದು, ಕಳೆದ ಕೆಲ ದಿನಗಳಿಂದ ಟೊಮ್ಯಾಟೋಗೆ ಬಂದ ಬಾರೀ ಬೆಲೆ, ಇದೀಗ ಬರಗಾಲದ ಹಿನ್ನಲೆ ಈರುಳ್ಳಿಗೂ ಬಂಗಾರದ ಬೆಲೆ ಬಂದಿದೆ. ರೈತರಿಗೆ(Farmers) ಅಧಿಕ ಲಾಭ ನೀಡುತ್ತಿದ್ದು, ಗ್ರಾಹಕರಿಗೆ ಕಣ್ಣೀರು ಎನ್ನಲಾಗುತ್ತಿದೆ. ಆದರೆ, ಅಸಲಿಗೆ ಈರುಳ್ಳಿ ದರ ಏರಿಕೆಯಾಗಿದೆಯಾ? ನಿಜವಾಗಿಯೂ ರೈತರಿಗೆ ಬೆಲೆ ಏರಿಕೆ ಲಾಭ ಸಿಕ್ಕಿದೆಯಾ ಎಂಬ ಪ್ರಶ್ನೆ ಮೂಡಿದೆ. ಕಳೆದ ಒಂದು ವಾರದಿಂದ ಬಿಡಿ ಮಾರುಕಟ್ಟೆಗಳಲ್ಲಿ ಗ್ರಾಹಕರು ಕೊಳ್ಳುವ ಈರುಳ್ಳಿ ದರ ಏರಿಕೆಯಾಗುತ್ತಿರುವುದು ನಿಜ. 30 ರಿಂದ 100 ರೂಪಾಯಿವರೆಗೂ ಗುಣಮಟ್ಟದ ಪ್ರಕಾರ ಈರುಳ್ಳಿ ಮಾರಾಟವಾಗುತ್ತಿದೆ. ಆದರೆ, ರೈತರಿಗೆ ಬೆಲೆ ಏರಿಕೆ ಲಾಭ ಸಿಕ್ಕೇ ಇಲ್ಲ, ಎಲ್ಲೋ ಒಂದೆಡೆ 10 ಸಾವಿರಕ್ಕೆ ಒಂದು ಕ್ವಿಂಟಾಲ್ ಈರುಳ್ಳಿ ಮಾರಾಟವಾಗಿದೆ ಎಂಬ ಸುದ್ದಿ ಹರಡಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ವಾರದಲ್ಲಿ ಎರಡು ಬಾರಿ ನಡೆಯುವ ಬಿರಂಗ ಹರಾಜಿನಲ್ಲಿ ಈರುಳ್ಳಿ ಮಾರಾಟವಾಗಿದ್ದು ಕ್ವಿಂಟಾಲ್ ಗೆ 3 ರಿಂದ 6 ಸಾವಿರ ಮಾತ್ರ.
ಕ್ವಿಂಟಾಲ್ ಈರುಳ್ಳಿ 2500 ರಿಂದ 6000 ರೂಪಾಯಿಗೆ ಮಾತ್ರ ಮಾರಾಟ
ಇಂದು ವಿಜಯಪುರ ನಗರದ ಎಪಿಎಂಸಿ ಆವರಣದಲ್ಲಿ ಬಹಿರಂಗ ಹರಾಜಿನಲ್ಲಿ ಒಂದು ಕ್ವಿಂಟಾಲ್ ಈರುಳ್ಳಿ 2500 ರಿಂದ 6000 ರೂಪಾಯಿಗೆ ಮಾತ್ರ ಮಾರಾಟವಾಗಿದೆ. 6 ಸಾವಿರ ಗಡಿ ದಾಟಿ, ಅದರ ಮೇಲೆ ಯಾವುದೇ ಉತ್ತಮ ಗುಣಮಟ್ಟದ ಈರುಳ್ಳಿ ಮಾರಾಟವಾಗಿರುವ ದಾಖಲೆಯೇ ಇಲ್ಲವಾಗಿದೆ. ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕುಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತದೆ. ಈ ತಾಲೂಕುಗಳನ್ನು ಈರುಳ್ಳಿ ಕಣಜಗಳೆಂದು ಕೂಡ ಕರೆಯಲಾಗುತ್ತದೆ. ಇಷ್ಟರ ಹೊರತಾಗಿ ಬಬಲೇಶ್ವರ, ದೇವರಹಿಪ್ಪರಗಿ ತಾಲೂಕಿನ ಭಾಗದಲ್ಲೂ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯ ಮಧ್ಯೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಾಗಿತ್ತು. ಆದರೆ ಮಳೆಯಾಗದ ಕಾರಣ ಶೇಕಡಾ 45 ರಿಂದ 50 ರಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ.
ಇದನ್ನೂ ಓದಿ:ಗಗನಕ್ಕೇರಿದ ಈರುಳ್ಳಿ ದರ: ಒಂದೇ ವಾರದಲ್ಲಿ ಡಬ್ಬಲ್ ರೇಟ್, ಮುಂದಿನ ವಾರ 100 ರೂ. ಗಡಿ ದಾಟುವ ಸಾಧ್ಯತೆ
ಇಷ್ಟರ ಮದ್ಯೆ ಮಳೆಯಾಗದ ಕಾರಣ ಕೆಲವರು ಈರುಳ್ಳಿ ಬೆಳೆಯನ್ನೇ ನಾಶ ಮಾಡಿದ್ದರು. ಮಳೆ ಇಲ್ಲದ ಕಾರಣ ಈರುಳ್ಳಿ ಫಸಲು ಬರಲ್ಲ ಎಂದು ಇಡೀ ಬೆಳೆಯನ್ನು ನಾಶ ಮಾಡಿ ಮತ್ತೋಂದು ಬೆಳೆ ಬಿತ್ತನೆ ಮಾಡಲು ಚಿಂತಿಸಿದ್ದರು. ಆದರೆ, ಅದಕ್ಕೂ ಮಳೆಯಾಗಲಿಲ್ಲ. ಆದರೆ, ಇದೀಗ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ ಎಂಬ ಸುದ್ದಿ ರೈತರನ್ನು ದಾರಿ ತಪ್ಪಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿಗೆ ಬಾರೀ ಬೆಲೆ ಬಂದಿದೆ. 10 ರಿಂದ 15 ಸಾವಿರಕ್ಕೆ ಒಂದು ಕ್ವಿಂಟಾಲ್ ಈರುಳ್ಳಿ ದರ ಕಂಡಿದೆ. ಮಾರುಕಟ್ಟೆಗಳಲ್ಲಿ ಹೆಚ್ಚು ದರಕ್ಕೆ ಮಾರಾಟವಾಗಿದೆ ಎಂಬ ವಿಚಾರ ಹರಿದಾಡುತ್ತಿದ್ದು, ರೈತರಿಗೆ ಸಂಕಷ್ಟ ತಂದಿದೆ. ಇಂತಹ ಸುದ್ದಿಯನ್ನು ನಂಬಿ ಇದ್ದಬದ್ದ ಈರುಳ್ಳಿ ಬೆಳೆಯನ್ನು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಬಂದ ರೈತರು ಕೈಕೈ ಹಿಸುಕಿಕೊಳ್ಳುವಂತಾಗುತ್ತಿದೆ. ಕಾರಣ ಕ್ವಿಂಟಾಲ್ ಈರುಳ್ಳಿ 3 ರಿಂದ 6 ಸಾವಿರ ರೂಪಾಯಿಗೆ ಮಾತ್ರ ಮಾರಾಟವಾಗುತ್ತಿದೆ. ಇದು ನಮಗೆ ಮಾಡುತ್ತಿರುವ ಮೋಸ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ವಿಜಯಪುರ ಜಿಲ್ಲೆಯಲ್ಲಿ ಬರದ ಮದ್ಯೆ ಕಟ್ಟಪಟ್ಟು ಬೆಳೆದ ಈರುಳ್ಳಿಗೆ ದರ ಸಿಗುತ್ತಿಲ್ಲ. ಆದರೆ, ಈರುಳ್ಳಿ ದರ ನಿತ್ಯ ಏರಿಕೆಯಾಗುತ್ತಿದೆ ಎಂದು ನಂಬಿ ಜಮೀನಿನಲ್ಲಿದ್ದ ಇದ್ದಬದ್ದ ಈರುಳ್ಳಿಯನ್ನು ಕಟಾವು ಮಾಡಿಕೊಂಡು ಈರುಳ್ಳಿ ಮಾರಾಟ ಮಾಡಲು ಬರುವ ರೈತರಿಗೆ ಮಾತ್ರ ಮೋಸ ಆಗುತ್ತಿದೆ. ಈರುಳ್ಳಿಗೆ ಬಾರೀ ದರ ಏರಿದೆ ಎಂಬ ಸುಳ್ಳು ಸುದ್ದಿ ಹರಿದಾಡಿದ್ದು, ಕಷ್ಟಪಟ್ಟು ಈರುಳ್ಳಿ ಬೆಳೆಯನ್ನು ಬೆಳೆದ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ರೈತರು ಮಾರುಕಟ್ಟೆಯಲ್ಲಿನ ಅಸಲಿ ದರ ಪರಿಶೀಲನೆ ಮಾಡಿ ಈರುಳ್ಳಿ ಮಾರಾಟಕ್ಕೆ ತರುವುದು ಸೂಕ್ತ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ