ಟೊಮೆಟೊ ದರ ಮತ್ತಷ್ಟು ಕುಸಿತ; ಗ್ರಾಹಕರು ಫುಲ್ ಖುಷ್, ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಇಳಿಕೆ ಸಾಧ್ಯತೆ

| Updated By: ಆಯೇಷಾ ಬಾನು

Updated on: Aug 09, 2023 | 1:56 PM

Tomato Rate: ಕೊನೆಗೂ ಟೊಮೆಟೊ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಕಳೆದ ವಾರ ಒಂದು ಕೆಜೆಗೆ 160 ರಿಂದ 180 ರೂ. ಇತ್ತು. ಇಂದು ಕೆಜಿಗೆ ಟೊಮೆಟೊ 80 ರಿಂದ 90 ರೂಪಾಯಿ ಇದೆ.

ಟೊಮೆಟೊ ದರ ಮತ್ತಷ್ಟು ಕುಸಿತ; ಗ್ರಾಹಕರು ಫುಲ್ ಖುಷ್, ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಇಳಿಕೆ ಸಾಧ್ಯತೆ
ಟೊಮೆಟೋ
Follow us on

ಬೆಂಗಳೂರು, ಆ.09: ಕೆಲ ತಿಂಗಳ ಹಿಂದೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಟೊಮೆಟೊ(Tomato) ಈಗ ಇಳಿಕೆಯತ್ತ ಸಾಗಿದೆ. ಕೊನೆಗೂ ಟೊಮೆಟೊ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಕಳೆದ ವಾರ ಒಂದು ಕೆಜೆಗೆ 160 ರಿಂದ 180 ರೂ. ಇತ್ತು. ಇಂದು ಕೆಜಿಗೆ ಟೊಮೆಟೊ 80 ರಿಂದ 90 ರೂಪಾಯಿ ಇದೆ. 200ರೂಗೆ ಮಾರಾಟವಾಗಿ ದಾಖಲೆ ಮಾಡಿದ್ದ ಕೆಂಪು ಸುಂದರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು ಆಗಸ್ಟ್ ಅಂತ್ಯದೊಳಗೆ ಮತ್ತಷ್ಟು ಬೆಲೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.

ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಟೊಮೆಟೊ ಖರೀದಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ. ಟೊಮೆಟೊ ಬೆಲೆ ಜಾಸ್ತಿಯಾದಗಿನಿಂದ ಮಹಿಳೆಯರು ಟೊಮೆಟೊ ಖರೀದಿಸಲು ಯೋಚಿಸುವಂತಾಗಿತ್ತು. ಸದ್ಯ ಈಗ ಬೆಲೆ ಇಳಿಕೆಯಾಗಿದ್ದು ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಹಾಗೂ ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಯಷ್ಟೋ ದಿನದಿಂದ ಟೊಮೆಟೊ ಬಾತ್ ಮಾಡಿರಲಿಲ್ಲ. ಈಗ ಹೋಗಿ ಮಾಡಿ ಹೊಟ್ಟೆ ತುಂಬ ತಿಂತೀವಿ ಎಂದು ಗ್ರಾಹಕರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೊಂದೆಡೆ ಟೊಮೆಟೊ ಇಳಿಕೆಯಾಗುತ್ತಿದ್ದಂತೆ ವ್ಯಾಪಾರ ವಹಿವಾಟು ಜೋರಾಗಿದೆ. ಇಷ್ಟು ದಿನ ಅರ್ಧ ಕೆಜಿ, ಕಾಲ್ ಕೆಜಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಇದೀಗಾ ಎರಡು ಕೆಜಿ ಖರೀದಿ ಮಾಡ್ತಿದ್ದಾರೆ ಎಂದು ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರೊಬ್ಬರು ತಿಳಿಸಿದರು.

ಇದನ್ನೂ ಓದಿ: ಟೊಮೆಟೊ ತೋಟಕ್ಕೆ ಪೊಲೀಸ್ ಕಾವಲು: ರೈತ ಫುಲ್ ಖುಷ್, ವಿಡಿಯೋ ನೋಡಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ‌ ಕುಸಿತ

ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾದ ಕೋಲಾರದ ಎಪಿಎಂಸಿಯಲ್ಲೂ ಟೊಮೆಟೊ ಬೆಲೆ ಇಳಿಕೆಯಾಗಿದೆ. ಹದಿನೈದು ಕೆಜಿ ಬಾಕ್ಸ್ ಟೊಮೆಟೊಗೆ 1000- 1200 ರೂಗೆ ಕುಸಿದಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಬೆಲೆ ಇಳಿಯುತ್ತಿದ್ದು ಬಾಕ್ಸ್ ಟೊಮೆಟೊ ಮೇಲೆ 1500 ಕುಸಿತ ಕಂಡಿದೆ. ಕಳೆದ ಎರಡು ತಿಂಗಳಿಂದ ಟೊಮೆಟೊ ಅತ್ಯಧಿಕ ಬೆಲೆ‌ ಏರಿಕೆ ಕಂಡಿತ್ತು. ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಹೆಚ್ಚಾದ ಹಿನ್ನಲೆ ಹಾಗೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಪೂರೈಕೆ ಹೆಚ್ಚಾದ ಕಾರಣ ಟೊಮೆಟೊ ಬೆಲೆ ಇಳಿಕೆ ಕಂಡಿದೆ.

ಆಗಸ್ಟ್‌ ಅಂತ್ಯಕ್ಕೆ ಬೆಲೆ ಇನ್ನೂ ಇಳಿಕೆ

ಟೊಮೆಟೊ ಇಳುವರಿ ಜುಲೈನಲ್ಲಿ 2.23 ಲಕ್ಷ ಮೆಟ್ರಿಕ್‌ ಟನ್‌ ಇದ್ದರೇ, ಆಗಸ್ಟ್‌ನಲ್ಲಿ ದುಪ್ಪಟ್ಟು ಅಂದರೇ 5.44 ಲಕ್ಷ ಮೆಟ್ರಿಕ್‌ ಟನ್‌ಗೆ ಏರುವ ಸಾಧ್ಯತೆಗಳಿವೆ. ಹೀಗಾಗಿ ಟೊಮೆಟೊ ದರ ಆಗಸ್ಟ್‌ ಅಂತ್ಯಕ್ಕೆ ಇಳಿಕೆಯಾಗಬಹುದು ಎನ್ನಲಾಗುತ್ತಿದೆ.

ಉತ್ತರ ಭಾರತದ ಮಾರುಕಟ್ಟೆಗೆ ಹಿಮಾಚಲ ಪ್ರದೇಶದಿಂದ ಹೆಚ್ಚು ಟೊಮೆಟೊ ಬರುತ್ತದೆ. ಆ ರಾಜ್ಯದಲ್ಲಿ ಟೊಮೆಟೊ ಇಳುವರಿ ಜುಲೈನಲ್ಲಿ 2,000 ಮೆಟ್ರಿಕ್‌ ಟನ್‌ ಇತ್ತು. ಅದು ಆಗಸ್ಟ್‌ನಲ್ಲಿ 30,000 ಮೆಟ್ರಿಕ್‌ ಟನ್‌ಗೆ ವೃದ್ಧಿಯಾಗುವ ನಿರೀಕ್ಷೆ ಇದೆ. ಇದಲ್ಲದೇ ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಧ್ಯ ಪ್ರದೇಶಗಳಲ್ಲೂ ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಗಣನೀಯ ಇಳುವರಿ ಬರುವ ಸಾಧ್ಯತೆಗಳಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ